ಬೆಂಗಳೂರು: ಪಂಚಮಸಾಲಿ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಧರಣಿಯು ಕಾವು ಪಡೆದುಕೊಂಡಿದೆ. ಧರಣಿಯಲ್ಲಿ ನೂರಾರು ಪಂಚಮಸಾಲಿಗಳು ಭಾಗಿಯಾಗಿದ್ದಾರೆ.
ಸಂಜೆಯ ಮಹತ್ವದ ಸಭೆಗೆ ಯತ್ನಾಳ್ ದೆಹಲಿಯಿಂದ ಬರುವ ಸಾಧ್ಯತೆ ಇದ್ದು, ಉಪಸಭಾಪತಿ ಆನಂದ ಮಹಾಮನಿ ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಇದೇ ವೇಳೆ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸತ್ಯದ ಹಾದಿಯಲ್ಲಿ, ನ್ಯಾಯದ ಮಾರ್ಗದಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು. ಮಾರ್ಚ್ 4 ನೇ ತಾರೀಖಿನವರೆಗೂ ಸರಕಾರಕ್ಕೆ ಗಡುವು ಕೊಟ್ಟಿದ್ದೇವೆ, ನಂತರ ಅಮರಣಾಂತ ಉಪವಾಸ ಸತ್ಯಗ್ರಹ ಪ್ರಾರಂಭ ಮಾಡಲಿದ್ದೇವೆ ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ, ರಾಜ್ಯದ ಜಿಲ್ಲೆ, ಪದಾಧಿಕಾರಿಗಳ ಸಭೆ ಕೂಡ ಕರೆಯಲಾಗಿದ್ದು, ಹಾಲಿ, ಮಾಜಿ ಜನಪ್ರತಿನಿಧಿಗಳಿಗೂ ಸಭೆಗೆ ಆಹ್ವಾನ ನೀಡಲಾಗಿದೆ ಎಂದರು.
ಸಭೆಯ ನಂತರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ, ಲಿಂಗಾಯತ ಮಠಾಧೀಶರು ರಸ್ತೆಗಿಳಿಯವರೆಗೂ ಮುಖ್ಯಮಂತ್ರಿಗಳು ಕಾಯಬಾರದಿತ್ತು, ಪ್ರತಿಭಟನೆ ನಡೆಸಬೇಕಾಗಿ ಬಂದರೂ ನಾವು ಧೃತಿಗೆಟ್ಟಿಲ್ಲ ಎಂದು ಗುಡುಗಿದರು.
ಆಶಾವಾದ ಇಟ್ಟುಕೊಂಡು ಧರಣಿ ಮಾಡುತ್ತಿದ್ದೇವೆ, ಕಳೆದೆರಡು ದಿನಗಳಲ್ಲಿ ನನಗೆ ಸರ್ಕಾರ ಮನವಿ ಮಾಡಿಕೊಳ್ಳುತ್ತಿದೆ, ಧರಣಿ ಕೈ ಬಿಡುವಂತೆ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ವರದಿ ನಂತರ ಕಾನೂತ್ಮಕವಾಗಿ ಸಹಕಾರ ಮಾಡುತ್ತೇವೆ ಅಂತ ಸಕರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ ಎಂದೂ ಮಾಹಿತಿ ನೀಡಿದರು. ಗೃಹ ಸಚಿವ, ಸಿಸಿ ಪಾಟೀಲ್ ಸೇರಿ ಇಡೀ ಸರ್ಕಾರ ಮಾಡಿರುವ ಮನವಿ ಕುರಿತು ಇಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಯಾವುದೇ ಆಯೋಗದ ವರದಿ ಇಲ್ಲದೇ ಮುಖ್ಯಮಂತ್ರಿಗಳು ಶಿಫಾರಸು ಮಾಡಿದ್ದಾರೆ, ಅದೇ ಥರಾ ನಮಗೂ ಅವಕಾಶ ಕಲ್ಪಿಸಬೇಕು. ಇಂದಿನ ಸಭೆಗೆ ಸಿಸಿ ಪಾಟೀಲ್ ಹಾಗೂ ಮುರಗೇಶ್ ನಿರಾಣಿ ನಮಗೆ ಆಹ್ವಾನ ಕೊಟ್ಟಿಲ್ಲ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾಧ್ಯಮಗಳ ಜೊತೆ ಮಾತನಾಡಿ ಇದೊಂದು ಪಕ್ಷಾತೀತ ಹೋರಾಟ. ಇಂದು ದುಂಡು ಮೇಜಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ, ಸಭೆಗೆ ಎಲ್ಲರೂ ಬರಬೇಕು ಎಂದು ಮನವಿ ಮಾಡಿದರು.
ಸಂಜೆ ನಡೆಯುವ ಸಭೆಗೆ ಸಚಿವರಿಗೂ ಆಹ್ವಾನ ನೀಡಿದ್ದೇವೆ, ಗೃಹ ಸಚಿವರು, ಸಿಸಿ ಪಾಟೀಲ್ ಸ್ವಾಮೀಜಿಗಳ ಜೊತೆ ಚರ್ಚೆ ಮಾಡಿದ್ದಾರೆ. ಇಬ್ಬರು ಸಚಿವರು ಸಲಹೆಗಳನ್ನು ಕೊಟ್ಟಿದ್ದಾರೆ, ಆ ಸಲಹೆಗಳು ಸಹ ಇಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಯತ್ನಾಳ್ ದೆಹಲಿಗೆ ಹೋಗಿದ್ದಾರೆ, ನನಗೆ ದೂರವಾಣಿ ಕರೆ ಮಾಡಿ ಇವತ್ತು ಸಭೆಗೆ ಭಾಗವಹಿಸ್ತೀನಿ ಅಂತ ಹೇಳಿದ್ದಾರೆ, ಸರ್ಕಾರಕ್ಕೆ ಯಾವುದೇ ಕಾಲಾವಕಾಶ ಕೊಡುವುದಿಲ್ಲ, 27 ವರ್ಷದಿಂದ ಕಾಲಾವಕಾಶ ಕೊಟ್ಟಿದ್ದೇವೆ ಎಂದು ಹೇಳಿದರು. ಯಡಿಯೂರಪ್ಪ ನಮ್ಮ ಹೋರಾಟ ಪರಿಗಣಿಸುತ್ತಿಲ್ಲ, ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಗಲಿದೆ ಎಂದು ಮಾಹಿತಿ ನೀಡಿದರು.
ಪಂಚಮಸಾಲಿ ಮೀಸಲಾತಿ ಧರಣಿಯಲ್ಲಿ ಉಪಸಭಾಪತಿ ಆನಂದ ಮಹಾಮನಿ ಭಾಗಿಯಾಗಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಕು, ಯಾವಾಗಲೋ ಮೀಸಲಾತಿ ಸಿಗಬೇಕಿತ್ತು, ಪಂಚಮಸಾಲಿ ಸಮುದಾಯದ ತುಂಬಾ ಹಿಂದುಳಿದಿದೆ ಎಂದರು.
ನಮ್ಮ ಸಮಾಜದ ಜನರ ಒಳಿತಿಗಾಗಿ ಸ್ವಾಮೀಜಿಗಳು ಪಾದಯಾತ್ರೆ ಮಾಡಿದ್ದಾರೆ, ನಾನು ಸಂವಿಧಾನಾತ್ಮಕ ಹುದ್ದೆ ಇರುವ ಕಾರಣ ಮೊನ್ನೆ ಸಮಾವೇಶದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು. ಹೋರಾಟಕ್ಕೆ ನನ್ನ ಬೆಂಬಲ ಇದೆ, ಸ್ವಾಮೀಜಿಗಳ ಐತಿಹಾಸಿಕ ಪಾದಯಾತ್ರೆಗೆ ಜಯಸಿಗಲಿ, ಸಿಎಂಗೆ ನಾವೂ ಹೇಳುವ ಕೆಲಸ ಮಾಡುತ್ತೇವೆ ಎಂದರು.