ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಶಿಫ್ಟ್ ಮಾಡುವಂತೆ ಸಿಎಂ ಆದೇಶ ಮಾಡಿದ್ದು, ಅವರನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೆಲವೇ ಗಂಟೆಗಳಲ್ಲಿ ಅವರನ್ನು ಶಿಫ್ಟ್ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡುತ್ತೇವೆ. ಇದಕ್ಕಾಗಿ ಎಲ್ಲಾ ಅಗತ್ಯ ತಯಾರಿ ಮಾಡಿಕೊಳ್ತಿದ್ದೇವೆ. ಜೈಲು ಸಿಬ್ಬಂದಿಗೂ ಕ್ವಾರಂಟೈನ್ ಸೂಚನೆ ಕೊಡಲಾಗಿದೆ. ಪಾದರಾಯನಪುರ ಪೊಲೀಸರರನ್ನು ಕೂಡ ತಪಾಸಣೆ ಮಾಡಲಾಗುತ್ತದೆ, ಅಗತ್ಯ ಬಿದ್ದರೆ ಅವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ. ಕಾನೂನಿನ ದೃಷ್ಟಿಯಿಂದ ಕೋರ್ಟ್ಗೆ ಏನು ತಿಳಿಸಬೇಕೋ ಅದನ್ನು ತಿಳಿಸುತ್ತೇವೆ ಎಂದರು.
ಇನ್ನು ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿರುವುದರಲ್ಲಿ ಯಾರದ್ದೂ ತಪ್ಪಿಲ್ಲ, ಕೊರೊನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರದ ಕ್ರಮವನ್ನು ಬೊಮ್ಮಾಯಿ ಸಮರ್ಥಿಸಿಕೊಂಡರು.
ರಾಮನಗರ ಜಿಲ್ಲೆಯ ಜನರು ಭಯಪಡುವ ಅಗತ್ಯತೆ ಇಲ್ಲ, ಈಗಾಗಲೇ ಆರೋಪಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅವರಿಂದ ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಹೀಗಾಗಿ ಯಾರೂ ಭಯ ಪಡಬೇಡಿ ಎಂದು ರಾಮನಗರ ಜಿಲ್ಲೆಯ ಜನರಿಗೆ ಗೃಹ ಸಚಿವ ಬೊಮ್ಮಾಯಿ ಆತ್ಮಸ್ಥೈರ್ಯ ತುಂಬಿದರು.