ಬೆಂಗಳೂರು: ವಿಶ್ವಮಟ್ಟದಲ್ಲಿ ಎಲ್ಲರನ್ನೂ ತಲ್ಲಣಗೊಳ್ಳಿಸಿರುವ ವಿಷಯ ಕೊರೊನಾ ವೈರಸ್. ರಾಜ್ಯದಲ್ಲಿ ಕೂಡಾ ಇದರ ಹಾವಳಿ ಕಡಿಮೆಯೇನಿಲ್ಲ. ಈವರೆಗೂ 50 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರೇ ಹೆಚ್ಚಾಗಿ ಕೊರೊನಾಗೆ ಬಲಿಯಾಗಿದ್ದಾರೆ.
ಕೊರೊನಾ ಭೀತಿಯಿಂದ ಈಗ ಜನರು ಸುಖಾಸುಮ್ಮನೇ ಕೃತಕ ಆಕ್ಸಿಜನ್ ಬಳಸುವುದಕ್ಕೆ ಮುಂದಾಗುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಹೇರುವುದಕ್ಕೂ ಕೂಡಾ ಕೆಲವೊಂದು ಆಸ್ಪತ್ರೆಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 18,145 ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 9,094 ಹಾಗೂ ಆರೋಗ್ಯ ಇಲಾಖೆಯಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ 8,490 ಆಕ್ಸಿಜನ್ ಸೌಲಭ್ಯ ಇರುವ ಆಸ್ಪತ್ರೆಗಳಿವೆ.
ಆಕ್ಸಿಜನ್ ಯಾರಿಗೆ ಬೇಕು..? ತಜ್ಞರು ಹೇಳೋದೇನು..?
ಯಾರಿಗಾದರೂ ಸೋಂಕು ಕಾಣಿಸಿದ ತಕ್ಷಣ, ಆಕ್ಸಿಜನ್ ಇರುವ ಆಸ್ಪತ್ರೆಯೇ ಬೇಕು ಎಂದು ಬಯಸುತ್ತಾರೆ. ಇದರಿಂದ ಆಕ್ಸಿಜನ್ ಅವಶ್ಯಕತೆ ಇರುವ ರೋಗಿಗಳು ಆಕ್ಸಿಜನ್ ದೊರೆಯದೇ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಕ್ಸಿಜನ್ ಬೇಕೋ, ಬೇಡವೋ ಎಂಬ ಬಗ್ಗೆ ವೈದ್ಯರ ಸಲಹೆ ಪಡೆದು ಅದನ್ನು ಪಾಲಿಸುವುದು ಒಳ್ಳೆಯದು.
ಈ ಬಗ್ಗೆ ಶ್ವಾಸಕೋಶ ತಜ್ಞ ಟಿ.ಪ್ರಸನ್ನ ಕುಮಾರ್ ಈಟಿವಿ ಭಾರತ್ನೊಂದಿಗೆ ಮಾತನಾಡಿದ್ದು, ಸಾರ್ವಜನಿಕರು ಕೊರೊನಾಗೆ ಗಾಬರಿಯಾಗದೇ ಮುಂಜಾಗ್ರತೆ ವಹಿಸಬೇಕು.ಶ್ವಾಸಕೋಶದ ಸಮಸ್ಯೆ ಉಳ್ಳವರಿಗೆ ಅಂದರೆ ಅಸ್ತಮಾ, ಸಿಒಪಿಡಿ ಹಾಗೂ ಹೀಗೆ ಇತರೆ ರೋಗಗಳು ಮುಂಚಿತವಾಗಿ ಇದ್ದು, ಇಂತಹವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಆಕ್ಸಿಜನ್ ಪೂರೈಕೆ ಅವಶ್ಯಕತೆ ಇರುತ್ತದೆ ಎಂದು ಸಲಹೆ ನೀಡಿದ್ದಾರೆ.