ಬೆಂಗಳೂರು: ಜಾತಿಗಳನ್ನು ಒಡೆಯುವುದು, ಅನಗತ್ಯ ಓಲೈಕೆಯೇ ಸಿದ್ದರಾಮಯ್ಯನವರ ಜಾತ್ಯತೀತತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
![ormer Chief Minister HD Kumaraswamy tweeted against siddaramaiah](https://etvbharatimages.akamaized.net/etvbharat/prod-images/kn-bng-09-ex-cm-hdk-tweet-script-7208083_07122020165939_0712f_1607340579_326.jpg)
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ, ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವೇಳೆ ಜೆಡಿಎಸ್ನ ಜಾತ್ಯತೀತತೆ ಬಹಿರಂಗವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ದೃಷ್ಟಿಯಲ್ಲಿ ಜಾತ್ಯತೀತತೆ ಅಂದರೆ ಏನು? ಇದನ್ನು ಈ ವೇಳೆಯಲ್ಲಿ ತಿಳಿಯ ಬಯಸುತ್ತೇನೆ. ಕಾಂಗ್ರೆಸ್ ಅಪವ್ಯಾಖ್ಯಾನದಿಂದಲೇ ಇಂದು ಜಾತ್ಯತೀತೆಯನ್ನು ಅನುಮಾನಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
![ormer Chief Minister HD Kumaraswamy tweeted against siddaramaiah](https://etvbharatimages.akamaized.net/etvbharat/prod-images/kn-bng-09-ex-cm-hdk-tweet-script-7208083_07122020165939_0712f_1607340579_993.jpg)
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವಂತೆ ಕಾಂಗ್ರೆಸ್ ಯಾವ ನಾಯಕನೂ ಸೌಜನ್ಯಕ್ಕೂ ಜೆಡಿಎಸ್ ಬಳಿ ಚರ್ಚಿಸಿಲ್ಲ. ಹೀಗಿದ್ದೂ ಜೆಡಿಎಸ್ನ ಜಾತ್ಯತೀತತೆಯ ಪರೀಕ್ಷೆ ನಡೆಯುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆ ದುರಹಂಕಾರದ್ದು. ಬೆಂಬಲ ಕೇಳದಿದ್ದರೂ ಬೆಂಬಲಿಸಲು ನಾವೇನು ಗುಲಾಮರಲ್ಲ. ಕಾಂಗ್ರೆಸ್ಸಿನ ದೌಲತ್ತೇ ಅದರ ದುಸ್ಥಿತಿಗೆ ಕಾರಣ ಎಂದು ಕಿಡಿಕಾರಿದ್ದಾರೆ.
'ನಮ್ಮ ಧರ್ಮ, ದೇವರಲ್ಲಿ ಆಳ ನಂಬಿಕೆ ಹೊಂದಿಯೂ ಎಲ್ಲರ ನಂಬಿಕೆಗಳನ್ನು ಗೌರವಿಸುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದು' ದೇವೇಗೌಡರ ಜಾತ್ಯತೀತತೆ ಎಂಬುದನ್ನು ಸಂದರ್ಭ ಸಿಕ್ಕಾಗ ಹೇಳಿದ್ದೇನೆ. ಆದರೆ ಕಾಂಗ್ರೆಸ್, ಸಿದ್ದರಾಮಯ್ಯರ ವ್ಯಾಖ್ಯಾನ ಇದಕ್ಕೆ ವಿರುದ್ಧವಾದ್ದು. ಜಾತಿಗಳನ್ನು ಒಡೆಯುವುದು, ಅನಗತ್ಯ ಓಲೈಕೆಯೇ ಅವರ ಜಾತ್ಯತೀತತೆ ಎಂದು ಕಿಡಿಕಾರಿದ್ದಾರೆ.
![ormer Chief Minister HD Kumaraswamy tweeted against siddaramaiah](https://etvbharatimages.akamaized.net/etvbharat/prod-images/kn-bng-09-ex-cm-hdk-tweet-script-7208083_07122020165939_0712f_1607340579_991.jpg)
ಒಳ್ಳೆ ಇಮೇಜ್ ಅನ್ನು ಚುನಾವಣೆ ಮತ್ತು ಸ್ಥಾನ ಗಳಿಕೆ ಮೇಲೆ ಲೆಕ್ಕ ಹಾಕಿದ್ದಾರೆ ಸಿದ್ದರಾಮಯ್ಯನವರು. ಹಾಗಾದರೆ ದೇಶದ ಎಲ್ಲ ಕಡೆ ಸೋಲುತ್ತಿರುವ ಕಾಂಗ್ರೆಸ್ ಇಮೇಜ್ ಕತೆ ಏನು?. 2018ರ ಚುನಾವಣೆಯಲ್ಲಿ 120 ರಿಂದ 80ಕ್ಕೆ ಕುಸಿದ, ಸ್ವತಃ ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರಿಗೆ ಇಮೇಜ್ ಇತ್ತೇ? ಇಮೇಜ್ ಇರುವುದು ನಮ್ಮ ಒಳ್ಳೆಯತನದಲ್ಲಿ ಎಂದು ಟೀಕಿಸಿದ್ದಾರೆ.
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂಬ ಕಾಂಗ್ರೆಸ್ಸಿಗರ ಸವಕಲು ಆರೋಪಕ್ಕೆ ಈ ಹಿಂದೆಯೇ ಉತ್ತರ ನೀಡಿದ್ದೇನೆ. ಈಗಲೂ ಹೇಳುತ್ತೇನೆ. ಕಾಂಗ್ರೆಸ್ಸೇ ಜೆಡಿಎಸ್ನ ಬಿ ಟೀಂ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಆವರಣ (ಬ್ರಾಕೆಟ್) ಹಾಕಿ ಅದರಲ್ಲಿ ಜೆಡಿಎಸ್ ಎಂದು ಬರೆದಾಗಷ್ಟೇ ಅದರ ಹೆಸರು ಪೂರ್ಣವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿ ಜೆಡಿಎಸ್ ಇದೆ ಎಂದಿದ್ದಾರೆ.
![ormer Chief Minister HD Kumaraswamy tweeted against siddaramaiah](https://etvbharatimages.akamaized.net/etvbharat/prod-images/kn-bng-09-ex-cm-hdk-tweet-script-7208083_07122020165939_0712f_1607340579_399.jpg)
ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು, ಹೈಕಮಾಂಡ್ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಅಂದರೆ ಹೈಕಮಾಂಡ್ ನಿರ್ಣಯ ತಮಗೆ ಇಷ್ಟವಿರಲಿಲ್ಲ ಎಂಬುದು ಸಿದ್ದರಾಮಯ್ಯ ಅವರ ಮಾತಿನಲ್ಲಿ ಧ್ವನಿಸುತ್ತಿರುವ ಅರ್ಥ. ಹೀಗಾಗಿಯೇ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಕೆಡವಿದರು. ಅದರ ಅಪವಾದ ಬೇರೆಯವರಿಗೆ ಬಳಿದರು ಎಂದು ಹೆಚ್ಡಿಕೆ ಗುಡುಗಿದ್ದಾರೆ.
ಜಾತ್ಯತೀತ ನಿಲುವು, ದೇವೇಗೌಡರ ಬದ್ಧತೆ ಬಗ್ಗೆ ನಾವು ನಿಮ್ಮಿಂದ ಉಪದೇಶ ಕೇಳಬೇಕಿಲ್ಲ. ದೇವೇಗೌಡರ ಬದ್ಧತೆಯನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿದ ಕಾಂಗ್ರೆಸ್ ಇವತ್ತು, ಜೆಡಿಎಸ್ನ ನಿಲುವನ್ನು ಪ್ರಶ್ನಿಸುವ ಯಾವ ನೈತಿಕತೆ ಉಳಿಸಿಕೊಂಡಿದೆ.
ಇನ್ನು, ಫೈವ್ ಸ್ಟಾರ್ ಸಂಸ್ಕೃತಿ ಬಗ್ಗೆ ರಾಗ ಎಳೆದಿದ್ದಿರಿ? ಫೈವ್ ಸ್ಟಾರ್ ಹಾಗೂ ಗುಡಿಸಲಿನಿಂದಲೂ ಅಧಿಕಾರ ನಡೆಸಿದ್ದೇನೆ. ಜನತೆಗೆ ನನ್ನಷ್ಟು ಸುಲಭವಾಗಿ ದಕ್ಕುವ ರಾಜಕಾರಣಿ ಮತ್ತೊಬ್ಬರಿಲ್ಲ ಎಂಬುದನ್ನು ನೆನಪಿಸಲು ಬಯಸುತ್ತೇನೆ. ನಿಮ್ಮ ತಾಳಕ್ಕೆ ಕುಣಿಯಲು ಜೆಡಿಎಸ್ ಗುಲಾಮಿ ಸಂಸ್ಕೃತಿಯ ಪಕ್ಷವಲ್ಲ. ರಾಜ್ಯದ ಇಂದಿನ ರಾಜಕಾರಣದ ಅಯೋಮಯ ಸ್ಥಿತಿಗೆ ನಿಮ್ಮ ದ್ವಂದ್ವ ಹಾಗೂ ಇಬ್ಬಂದಿತನದ ನಿಲುವೇ ಕಾರಣವೆಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.