ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೈಬ್ರೀಡ್ ತರಕಾರಿಗಳು ಸೇರಿದಂತೆ ಕಲಬೆರಕೆ ವಸ್ತುಗಳೇ ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಜನರಿಗೂ ಸಾವಯವ ತರಕಾರಿಗಳನ್ನು ಒದಗಿಸುವ ದೇಶಿ ಉತ್ಪನ್ನಗಳ ಮಾರಾಟ ಮಳಿಗೆ ಎಲ್ಲರನ್ನೂ ಆಕರ್ಷಿಸುತ್ತಿದೆ.
ನಗರದ ಸ್ವದೇಶಿ ಜಾಗರಣಾ ಮಂಚ್, ಪ್ರತಿ ಎರಡು ಹಾಗೂ ನಾಲ್ಕನೇ ಭಾನುವಾರ ಸಾವಯವ ಸಂತೆಯನ್ನು ಆಯೋಜಿಸಿ, ತರಕಾರಿ ಹಾಗೂ ಇನ್ನಿತರ ದೇಶಿ ಉತ್ಪನ್ನಗಳ ಮಾರಾಟಕ್ಕೆ ಬೆಂಬಲ ನೀಡುತ್ತಾ ಬಂದಿದೆ.
ವಿದ್ಯಾರಣ್ಯಪುರದಲ್ಲಿ ಆಯೋಜಿಸಲಾಗಿದ್ದ ಈ ಸಂತೆಯಲ್ಲಿ ನಗರದ ವಿವಿಧ ಭಾಗಗಳಿಂದ ಬಂದಿದ್ದ ಸಾವಯವ ಉತ್ಪನ್ನಗಳ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅಂತೆಯೇ ಗ್ರಾಹಕರು ಸಹ ತಮಗೆ ಬೇಕಾದಂತಹ ವಸ್ತುಗಳನ್ನು ಖರೀದಿಸುವುದರದಲ್ಲಿ ಮಗ್ನರಾಗಿದ್ದರು.
ಆರು ತಿಂಗಳ ಹಿಂದೆ ತಿಂಗಳಿಗೊಮ್ಮೆ ಆಯೋಜಿಸಲಾಗುತ್ತಿದ್ದ ಸಂತೆಯಲ್ಲಿ, ಸುತ್ತಮುತ್ತಲ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ಜನರ ಅಪೇಕ್ಷೆಯ ಮೇರೆಗೆ ಇದೀಗ ಪ್ರತಿ ತಿಂಗಳ ಎರಡನೆಯ ಹಾಗೂ ನಾಲ್ಕನೆಯ ಭಾನುವಾರ ಆಯೋಜಿಸಲಾಗುತ್ತಿದೆ. ರೈತರೇ ಬೆಳೆದ ಸಾವಯವ ತಳಿಯ ತಾಜಾ ಹಣ್ಣು, ಸೊಪ್ಪು, ತರಕಾರಿ ಮುಂತಾದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುವುದು ಸಂತೆಯ ವಿಶೇಷತೆಯಾಗಿದೆ.
ಇಲ್ಲಿ ಸೊಪ್ಪು, ತರಕಾರಿಯ ಜೊತೆಗೆ ಅಡಿಕೆಯಲ್ಲಿ ಕೆತ್ತಿದ ಗಣೇಶ, ನೂಲಿನಿಂದ ತಯಾರಿಸಿದ ಬಣ್ಣ ಬಣ್ಣದ ಓಲೆ, ಗಾಣದಲ್ಲಿ ಗ್ರಾಹಕರ ಮುಂದೆಯೇ ತಯಾರಿಸುವ ಎಣ್ಣೆ, ರಾಸಾಯನಿಕ ಮುಕ್ತ ಬೆಲ್ಲ, ದೇಶಿ ಹಸುವಿನಿಂದ ತಯಾರಿಸಿದ ತುಪ್ಪ, ನೈಸರ್ಗಿಕ ಜೇನುತುಪ್ಪ, ಹಲವು ಬಗೆಯ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ಗೃಹ ಔಷಧಿಗಳನ್ನು ಗ್ರಾಹಕರು ಖರೀದಿಸಿದರು.
ಭಾರತೀಯ ಪಾರಂಪರಿಕ ಗುಡಿ ಕೈಗಾರಿಕೆಯಿಂದ ತಯಾರಿಸಿದ ಮಡಿಕೆ-ಕುಡಿಕೆ, ನೀರಿನ ಹೂಜಿ, ಸಂಸ್ಕರಿಸಿದ ಬಾಳೆ ದಿಂಡು, ವಿವಿಧ ಬಗೆಯ ನೈಸರ್ಗಿಕ ಪಾನೀಯಗಳು, ಪರಿಸರ ಸ್ನೇಹಿ ಮನೆ ಶುಚಿಗೊಳಿಸುವ ಉತ್ಪನ್ನಗಳು, ಹಲವು ಬಗೆಯ ಸಿರಿಧಾನ್ಯಗಳು, ಬೀಜಮುಕ್ತ ಗಜನಿಂಬೆ, ನಿಂಬೆ, ಸಾವಯವ ಸಾಸಿವೆ, ಹುಚ್ಚೆಳ್ಳು, ಔಷಧಿಯ ಗುಣವುಳ್ಳ ಸಸಿಗಳು, ಮನೆಯಲ್ಲೇ ತಯಾರಿಸಿದ ಒತ್ತು ಶಾವಿಗೆ, ಸಾವಯವ ಉತ್ಪನ್ನಗಳಿಂದ ತಯಾರಿಸಿದ ಚಕ್ಕುಲಿ, ನಿಪ್ಪಟ್ಟು, ಕುರುಕಲು ತಿಂಡಿಗಳು ಹೀಗೆ ಸಾವಯವ ಉತ್ಪನ್ನಗಳ ಬೃಹತ್ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಬಾರಿಯ ಸಾವಯವ ಸಂತೆಯಲ್ಲಿ ಟೋಕನ್ ವ್ಯವಸ್ಥೆಯ ಜತೆಗೆ ಪ್ರತ್ಯೇಕ ಕೌಂಟರ್ಗಳನ್ನು ನಿರ್ಮಿಸಿ, ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಯಾವುದೇ ಗಡಿ ಬಿಡಿ ಇಲ್ಲದೆ ಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯೋಜಕ ಮಂಡಳಿಯ ಮುಖ್ಯಸ್ಥ ಶ್ರೀಕಂಠ ಮಾಹಿತಿ ನೀಡಿದ್ರು.