ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿ ಅಲುಗಾಡುತ್ತಿದೆ. ಹಾಗಾಗಿ ಕುರ್ಚಿ ಉಳಿಸಿಕೊಳ್ಳಲು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ. ನಾಳೆ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸಹ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ 65ರಷ್ಟು ಸ್ಥಾನ ಗೆದ್ದಿದ್ದೇವೆ. ಆದರೆ, ಇನ್ನೂ ಎಣಿಕೆ ಪೂರ್ಣಗೊಂಡಿಲ್ಲ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಯಡಿಯೂರಪ್ಪ ಹಾಗೆ ಹೇಳುತ್ತಿದ್ದಾರೆ. ಯಡಿಯೂರಪ್ಪ ಇನ್ನೂ ಹಗಲುಗನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಜನರನ್ನು ಮಿಸ್ಲೀಡ್ ಮಾಡುತ್ತಿದ್ದಾರೆ. ಯಡಿಯೂರಪ್ಪ ತಪ್ಪಾಗಿ ಮಾಹಿತಿ ನೀಡುತ್ತಿದ್ದಾರೆ. ಸಿಎಂ ಆಗಿ ಅವರು ಹಾಗೆ ಮಾಡಿದ್ದು ಸರಿಯಲ್ಲ ಎಂದರು.
ಮೀಸಲಾತಿ ಪ್ರಕಟವಾದ ನಂತರ ಯಾವ ಗ್ರಾಮ ಪಂಚಾಯತಿ ಯಾರಿಗೆ ಎಂದು ತಿಳಿಯಲಿದೆ ಎಂದ ಸಿದ್ದರಾಮಯ್ಯ, 2008ರಲ್ಲಿ ಆಪರೇಷನ್ ಕಮಲ ಪದ ಶುರು ಮಾಡಿದ್ದೇ ಯಡಿಯೂರಪ್ಪ. ಪಕ್ಷದ ಚಿಹ್ನೆ ಮೇಲೆ ಗ್ರಾಮ ಪಂಚಾಯತಿ ಚುನಾವಣೆ ನಡೆಯುವುದಿಲ್ಲ. ಆದರೆ, ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಮತ್ತು ಪಕ್ಷೇತರರು ಸ್ಪರ್ಧಿಸುತ್ತಾರೆ. ಗ್ರಾಮ ಪಂಚಾಯಿತಿಯ ಫಲಿತಾಂಶದ ಬಗ್ಗೆ ನಮ್ಮ ಬ್ಲಾಕ್ ಮತ್ತು ಬೂತ್ ಕಮಿಟಿ ಅಧ್ಯಕ್ಷರು ಹೇಳಬೇಕು. ಆಗ ಸ್ಪಷ್ಟ ಚಿತ್ರಣ ಸಿಗುತ್ತದೆ.
ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮೀಸಲಾತಿ ಪ್ರಕಟವಾದ ನಂತರ ಯಾವ ಗ್ರಾಮ ಪಂಚಾಯಿತಿ ಯಾರಿಗೆ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು. ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಯಡಿಯೂರಪ್ಪ ಹೇಳುತ್ತಾರೆ. ಅವರು ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ. ನಾಳೆಯೇ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸವಾಲು ಹಾಕಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಿಎಸ್ವೈ ಆಡಳಿತ ವೈಖರಿ ಸರಿಯಿಲ್ಲ ಎಂದಿದ್ದಾರೆ. ವಿಪಕ್ಷವಾಗಿ ನಾವು ಅದನ್ನೇ ಹೇಳುತ್ತಿದ್ದೇವೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜ್ಯದಲ್ಲಿ ಆಡಳಿತ ಕುಸಿದಿದೆ. ಮೊನ್ನೆ ಐಪಿಎಸ್ ಅಧಿಕಾರಿಗಳು ಬೀದಿಯಲ್ಲಿ ಕಚ್ಚಾಡಿದರು. ಸರ್ಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಲಿಲ್ಲ. ಸರ್ಕಾರದಿಂದ ಯಾವುದೇ ಸ್ಪಷ್ಟನೆ ಬರಲಿಲ್ಲ ಎಂದು ಟೀಕಿಸಿದರು.
ಇನ್ನು, ಬ್ರಿಟನ್ನಿಂದ ಬಂದವರನ್ನು ಈವೆರಗೂ ಪತ್ತೆ ಮಾಡಲು ಆಗಿಲ್ಲ. ಇದು ಇವರ ಬೇಜವಾಬ್ದಾರಿತನ ತೋರಿಸುತ್ತದೆ. ಆರೋಗ್ಯ ಹಾಗೂ ಗೃಹ ಸಚಿವರು ಬೇರೆ-ಬೇರೆ ಹೇಳಿಕೆ ನೀಡುತ್ತಿದ್ದಾರೆ. ವಿಮಾನದಿಂದ ಬಂದವರು ಕದ್ದು ಓಡಿಹೋಗಲು ಸಾಧ್ಯವೇ? ವಿಮಾನದಲ್ಲಿ ಬಂದವರನ್ನು ನಿಯಂತ್ರಣ ಮಾಡಲಾಗದವರು ಕೊರೊನಾ ಹೇಗೆ ನಿಯಂತ್ರಣ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ, ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದರು.