ಬೆಂಗಳೂರು: ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಸಹ ಸಾಕಷ್ಟು ಹೆಸರು ಮಾಡಿರುವ ಕಿದ್ವಾಯಿ ಸಂಸ್ಥೆ ಕಳೆದ 5 ದಶಕಗಳಲ್ಲಿ ಗಣನೀಯ ಬೆಳವಣಿಗೆ ಕಂಡಿದೆ. ಸಂಸ್ಥೆಗೆ ಬರುವ ಕ್ಯಾನ್ಸರ್ ರೋಗಿಗಳಿಗೆ ಆಧುನಿಕ ಸೌಲಭ್ಯಗಳನ್ನು ಬಳಸಿ ಉತ್ತಮ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ.
ಕಿದ್ವಾಯಿ ಸಂಸ್ಥೆಗೆ ಬರುವ ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆ ಆಗಬಾರದೆಂಬ ಕಾರಣಕ್ಕೆ ಬರೋಬ್ಬರಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್(Infosys) ಪ್ರತಿಷ್ಠಾನದಿಂದ ಹೊಸ ಒಪಿಡಿ ಬ್ಲಾಕ್ ನಿರ್ಮಾಣವಾಗಿದೆ. ಕಳೆದ ನಾಲ್ಕು ವರ್ಷಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಆಗಸ್ಟ್ 23 ರಂದು (ನಾಳೆ) ಉದ್ಘಾಟನೆಗೆ ಸಜ್ಜಾಗಿದೆ.
ಹೊಸ ತೀವ್ರ ನಿಗಾ ಘಟಕ ನಿರ್ಮಾಣ:
ಒಪಿಡಿ ಬ್ಲಾಕ್ ಉದ್ಘಾಟನೆ ಜೊತೆಗೆ ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ನೀಡಿರುವ ಅನುದಾನವನ್ನು ಬಳಸಿ ನಿರ್ಮಿಸಲಾಗಿರುವ ಅಸ್ಥಿ ಮಜ್ಜೆ ಕಸಿ ಘಟಕ, ಪೆಟ್ ಸ್ಕ್ಯಾನ್ ಬಂಕರ್, ಡೇ-ಕೇರ್ ವಾರ್ಡ್ ನವೀಕರಣ ಹಾಗೂ ಸ್ಟೆಪ್-ಒನ್ ಐಸಿಯು ಕೂಡ ಲೋಕಾರ್ಪಣೆಯಾಗಲಿದೆ. ಹಾಗೆಯೇ ಬ್ರಾಕಿ ಥೆರಪಿ ಮತ್ತು ಸೀಟಿ ಸಿಮ್ಯೂಲೇಟರ್ ಸೌಲಭ್ಯಗಳು ಕೂಡ ರೋಗಿಗಳಿಗೆ ಸಿಗಲಿದೆ. ಜೊತೆಗೆ ಡಾ.ಮಾಜೀದ್ ಪ್ರತಿಷ್ಠಾನದಿಂದ ಮಕ್ಕಳ ಅತ್ಯಾಧುನಿಕ ಹೊಸ ತೀವ್ರ ನಿಗಾ ಘಟಕವು ರೆಡಿಯಾಗಿದೆ. ಮೆಸರ್ಸ್ ಜನಾರ್ದನ್ ಅಸೋಸಿಯೇಟ್ಸ್ ವತಿಯಿಂದ ಎರಡು ಅಪರೇಷನ್ ಥಿಯೇಟರ್ ಮತ್ತು ಸೆಂಟ್ರಲ್ ಮೆಡಿಕಲ್ ಸ್ಟೋರ್ ನವೀಕರಿಸಲಾಗಿದೆ. ಅಲ್ಲದೇ ವೈದ್ಯಕೀಯ ದಾಖಲೆಗಳಾದ ಎಕ್ಸ್-ರೇ, ಸಿಟಿ ಮತ್ತು ಎಂ.ಆರ್.ಐ ಮತ್ತು ಸ್ಕ್ಯಾನ್ ಇತ್ಯಾದಿ ಇಮೇಜ್ಗಳ ಡಿಜಿಲೀಕರಣ ಲಭ್ಯವಿರಲಿದೆ.
ಕಾಗದರಹಿತ ಇ- ಆಸ್ಪತ್ರೆ:
ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯಿಂದ ರೋಗಿಗಳ ತಪಾಸಣಾ ವರದಿಗಳು ಇದೀಗ ಬೆರಳ ತುದಿಯಲ್ಲಿ ಲಭ್ಯವಾಗಲಿವೆ. ಈ ವ್ಯವಸ್ಥೆಯನ್ನು ಆಧರಿಸಿ ಇ- ಹಾಸ್ಪಿಟಲ್ ತಂತ್ರಾಂಶವನ್ನು ಸಂಸ್ಥೆಯಲ್ಲಿ ಅಳವಡಿಸಲಾಗಿದ್ದು, ಇದರಿಂದ ರೋಗಿಗಳ ಓಡಾಟವನ್ನು ಸಾಕಷ್ಟು ಕಡಿಮೆ ಮಾಡಲಿದೆ. ಈ ಮೂಲಕ ಕಿದ್ವಾಯಿ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ಕಾಗದ ರಹಿತ ಸರ್ಕಾರಿ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ.
ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ:
ಆಗಸ್ಟ್ 23 ರಂದು ಈ ಎಲ್ಲಾ ಸೌಲಭ್ಯಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಲಕ್ಷಾಂತರ ಕ್ಯಾನ್ಸರ್ ರೋಗಿಗಳು ಈ ಸೌಲಭ್ಯ ಪಡೆಯಬಹುದಾಗಿದೆ.