ಬೆಂಗಳೂರು: ರಾಜ್ಯಕ್ಕೆ ಕೊರೊನಾ ವೈರಸ್ ಕಾಲಿಟ್ಟ ಗಳಿಗೆಯಿಂದಾಗಿ ಇಂದಿಗೂ ಶಾಲಾ-ಕಾಲೇಜು ಆರಂಭಕ್ಕೆ ಮೀನಾ-ಮೇಷ ಎಣಿಸುವಂತಾಗಿದೆ. ಈ ಮಧ್ಯೆ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಆನ್ಲೈನ್ ಕ್ಲಾಸ್ಗಳನ್ನ ನಡೆಸಲಾಗುತ್ತಿದೆ. ಆದರೆ ಆರ್ಟಿಇ ಅಡಿ ಓದುತ್ತಿರುವ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಿಲ್ಲ ಎಂಬ ಕಾರಣಕ್ಕೆ ಬಡ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣಕ್ಕೆ ತೊಂದರೆಯುಂಟಾಗುತ್ತಿದೆ ಎಂದು ಆರ್ಟಿಇ ವಿದ್ಯಾರ್ಥಿಗಳ ಹಾಗೂ ಪೋಷಕರು ದೂರುತ್ತಿದ್ದಾರೆ.
ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವವರ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಆದರೆ ಎರಡು ವರ್ಷದಿಂದ ಯಾವುದೇ ಶುಲ್ಕವನ್ನು ಸರ್ಕಾರ ಭರಿಸಿಲ್ಲ ಎಂದು ಖಾಸಗಿ ಅನುದಾನಿತ ಶಾಲೆಗಳ ಒಕ್ಕೂಟ ಆರೋಪಿಸುತ್ತಿದೆ.
ಕೊರೊನಾ ಸಂಕಷ್ಟದಿಂದ ಸಾಮಾನ್ಯ ವಿದ್ಯಾರ್ಥಿಗಳ ಪೋಷಕರೂ ಕೂಡಾ ಶಾಲಾ ಶುಲ್ಕ ಕಟ್ಟೋಕೆ ಸಾಧ್ಯವಾಗಿಲ್ಲ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರುಗಳು ಬಂದಿವೆ. ಹಣ ಪಾವತಿ ಮಾಡದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಹಿಂದೆಸರಿಯುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂತೋಣಿ ಸಬಾಸ್ಟಿಯನ್, ಶುಲ್ಕ ಕಟ್ಟದ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಜೊತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.