ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿರುವ ಬಹುತೇಕ ಮಂದಿ ಕೆಲಸದ ಹುಡುಕಾಟಕ್ಕೆ ಆನ್ಲೈನ್ ಮೊರೆ ಹೋಗುತ್ತಿದ್ದಾರೆ. ಆದರೆ, ಸೈಬರ್ ಖದೀಮರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ನಿದರ್ಶನ ಇಲ್ಲಿದೆ.
ಕೆಲಸಬೇಕೆಂದು ಯೋಗೇಶ್ ಎಂಬಾತ ಕ್ವಿಕರ್ ಕೆರಿಯರ್ಸ್ ವೆಬ್ಸೈಟ್ಗೆ ಲಾಗಿನ್ ಆಗಿದ್ದಾರೆ. ಅದರಲ್ಲಿ ವರ್ಕ್ ಫ್ರಂ ಹೋಮ್ ಆಯ್ಕೆ ಮಾಡಿಕೊಂಡಿದ್ದಾನೆ. ಈ ವೇಳೆ ವೆಬ್ಸೈಟ್ ಕೆಲಸಕ್ಕೆ ಅಪ್ಲೈ ಮಾಡುವ ಲಿಂಕ್ ತೋರಿಸಿದೆ.
ಯೋಗೇಶ್ ಈ ಲಿಂಕ್ ಅನ್ನು ತೆರೆದು ಅಪ್ಲಿಕೇಶನ್ ತುಂಬಿದ್ದಾನೆ. ಬಳಿಕ ಅಪ್ಲಿಕೇಷನ್ ಶುಲ್ಕ 29 ರೂಪಾಯಿಯನ್ನು ಆನ್ಲೈನ್ ಮೂಲಕ ಪಾವತಿಸುವಂತೆ ತಿಳಿಸಿದೆ. ಈ ವೇಳೆ ಖಾತೆಯ ವಿವರ ತುಂಬುವಾಗ ಯೋಗೇಶ್ ಮೊಬೈಲ್ಗೆ ಒಟಿಪಿ ಬಂದಿದೆ.
ಈ ಒಟಿಪಿ ಹಾಕಿದ್ದೇ ತಡ 29 ರೂಪಾಯಿ ಜೊತೆಗೆ ಖಾತೆಯಲ್ಲಿದ್ದ 24 ಸಾವಿರ ರೂ ಹಣ ಕಟ್ ಆಗಿದೆ. ಮೊದಲು ಇದನ್ನು ಯೋಗೇಶ್ ಗಮನಿಸಿಲ್ಲ. ಆದರೆ, ಹಂತ ಹಂತವಾಗಿ ಅವರು 50 ಸಾವಿರ ರೂ ಕಳೆದುಕೊಂಡಿದ್ದಾರೆ. ಈ ವಿಚಾರ ಗೊತ್ತಾಗಿ ಗಾಬರಿಗೊಂಡ ಅವರು, ಬ್ಯಾಂಕ್ಗೆ ಕರೆ ಮಾಡಿದಾಗ ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಗೇಶ್ ಜಾಬ್ ಲಿಂಕ್ ನಂಬರ್ ಕರೆ ಮಾಡಿದರೆ, ಸೈಬರ್ ಖದೀಮರು ಅವಾಚ್ಯ ಶಬ್ದಗಳಿಂದ ನಿಂದಿಸಿ ಏನ್ ಬೇಕಾದ್ರೂ ಮಾಡ್ಕೋ ಎಂದು ಧಮ್ಕಿ ಹಾಕಿದ್ದಾರೆ. ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.