ಬೆಂಗಳೂರು : ಅಶ್ಲೀಲ ವಿಡಿಯೋ ಬಿಡುಗಡೆ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಕರೆ ಮಾಡಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪದಡಿ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೋಮಶೇಖರ್ ಪುತ್ರ ನಿಶಾಂತ್ ನೀಡಿದ ದೂರಿನ ಮೇರೆಗೆ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಎಂಬಾತನನ್ನು ಬಂಧಿಸಲಾಗಿದೆ. ಐದು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಕಳೆದ ತಿಂಗಳು 25ರಂದು ನಿಶಾಂತ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ನನ್ನ ಹಾಗೂ ತಂದೆಯನ್ನು ರಾಜಕೀಯವಾಗಿ ತೇಜೋವಧೆಗೆ ಗುರಿಯಾಗಿಸಿಕೊಂಡು ಅಪರಿಚಿತರು ಅಶ್ಲೀಲ ವಿಡಿಯೋಗೆ ನನ್ನ ಭಾವಚಿತ್ರ ಸೇರಿಸಿ ನನಗೆ ವಾಟ್ಸ್‌ಆ್ಯಪ್ ಕರೆ ಮಾಡಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಶಾಂತ್ ದೂರು ನೀಡಿದ್ದರು.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನೀರಸ: ಕಾರವಾರದಲ್ಲಿ ಮೀನು ಖರೀದಿಗೆ ಮುಗಿಬಿದ್ದ ಜನತೆ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಹುಲ್ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ತನಿಖೆ ವೇಳೆ ಹಲವು ವಿಚಾರಗಳು ಬಯಲಿಗೆ ಬಂದಿವೆ.
ಸಚಿವರ ಬಳಿ ಈ ಹಿಂದೆ ಕೆಲಸ ಮಾಡಿದ್ದ ಓರ್ವ ಸಿಬ್ಬಂದಿ ಕೈವಾಡವೂ ಇದರಲ್ಲಿದೆ ಎನ್ನಲಾಗುತ್ತಿದೆ. ಆತನೇ ಸಚಿವರ ಪುತ್ರನ ನಂಬರ್ ನೀಡಿರುವ ಶಂಕೆಯೂ ವ್ಯಕ್ತವಾಗಿದೆ. ಅಲ್ಲದೆ ವಿಜಯಪುರ ಜಿಲ್ಲೆಯ ಶಾಸಕರೊಬ್ಬರ ಪುತ್ರಿ ಭಾಗಿಯಾಗಿರುವ ಗುಮಾನಿಯೂ ವ್ಯಕ್ತವಾಗಿದೆ.