ಬೆಂಗಳೂರು: ಇತ್ತೀಚೆಗೆ ಬಿಎಂಟಿಸಿ ಬಸ್ಸುಗಳು ಎಲ್ಲೆಂದರಲ್ಲಿ ಕೈ ಕೊಡೋಕ್ಕೆ ಶುರು ಮಾಡಿವೆ. ಅವು ಕೈ ಕೊಟ್ಟ ಮೇಲೆ ಮುಂದಿನ ಪರಿಸ್ಥಿತಿ ದೇವ್ರಿಗೇ ಪ್ರೀತಿ. ಒಂದ್ ಕಡೆ ಟ್ರಾಫಿಕ್ ಜಾಮ್, ಮತ್ತೊಂದು ಕಡೆ ಬಸ್ಸಿನೊಳಗೆ ಇದ್ದ ಪ್ರಯಾಣಿಕರ ಪೆಚ್ಚು ಮುಖ. ಇದಿಷ್ಟು ಸಾಲದ್ದು ಅಂತ ಬಸ್ಸಿನ ಹಿಂದೆ ಇಡೀ ಟ್ರಾಫಿಕ್ ಪೊಲೀಸ್ ತಂಡ, ಜೊತೆಗೆ ಒಂದಿಷ್ಟು ಪ್ರಯಾಣಿಕರು ಬಸ್ ಅನ್ನು ತಳ್ಳಿದ್ದಾರೆ.
ಈ ಘಟನೆ ನಡೆದಿದ್ದು ನಗರದ ಶಿವಾಜಿನಗರದಲ್ಲಿ. ಶಿವಾಜಿನಗರದ ಬಸ್ ನಿಲ್ದಾಣದಿಂದ ಸ್ವಲ್ಪ ದೂರದಲ್ಲೇ ಬಿಎಂಟಿಸಿ ಬಸ್ಸೊಂದು ಕೆಟ್ಟು ನಿಲ್ಲುವಂತಾಯ್ತು. KA-01 FA-2002 ಬಸ್ ಸಂಖ್ಯೆಯ 144k ಮಾರ್ಗದ ಶಿವಾಜಿನಗರದಿಂದ ಕಾವಲ್ ಭೈರಸಂದ್ರಕ್ಕೆ ತೆರಳುವ ಬಸ್ಸು ಮಾರ್ಗ ಮಧ್ಯದಲ್ಲೇ ನಿಂತುಹೋಯ್ತು.
ಈ ವೇಳೆ ಬಸ್ಸನ್ನು ಎಷ್ಟೇ ಸಲ ಸ್ಟಾರ್ಟ್ ಮಾಡಿದರೂ ಸಹ ಸ್ಟಾರ್ಟ್ ಆಗದೇ ಇದ್ದಾಗ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯ್ತು. ಇತ್ತ ಶಿವಾಜಿನಗರದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಿರಿದಾದ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಬಾರದು ಅನ್ನೋ ಕಾರಣಕ್ಕೆ ಟ್ರಾಫಿಕ್ ಪೊಲೀಸರೇ ಸೇರಿ ಬಸ್ಸನ್ನು ತಳ್ಳೋ ಪರಿಸ್ಥಿತಿ ಬಂತು. ಇತ್ತ ಬಸ್ಸು ಕೆಟ್ಟುಹೋಗಿದ್ದು ಕಂಡು ಪ್ರಯಾಣಿಕರು ತಲೆ ಚಚ್ಚಿಕೊಂಡು ಮತ್ತೊಂದು ಬಿಎಂಟಿಸಿ ಮೊರೆ ಹೋಗುವಂತಾಯ್ತು.
ಒಟ್ಟಾರೆ, ಹಳೇ ಬಸ್ಸುಗಳನ್ನೇ ಬಿಎಂಟಿಸಿ ರಸ್ತೆಗಿಳಿಸುತ್ತಿದ್ಯಾ? ಅಥವಾ ಬಸ್ಸುಗಳ ಸರ್ವೀಸ್ ಸರಿಯಾಗಿ ಆಗ್ತಿಲ್ವಾ? ಡಿಪೋದಿಂದ ಬರುವಾಗ ಎಲ್ಲಾ ಪರಿಶೀಲನೆ ಆಗಿ ರಸ್ತೆಗಿಳಿಸೋಲ್ವಾ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಿಗಮದವರೇ ಹೇಳಬೇಕು.
ಇದನ್ನೂ ಓದಿ: ಹೃದಯಾಘಾತದ ನಂತರ ವ್ಯಾಯಾಮ ಮಾಡಬಾರದು ಎಂಬುದು ಎಷ್ಟು ಸತ್ಯ!?