ಬೆಂಗಳೂರು: ಆಟೋ, ಓಲಾ- ಉಬರ್ ಚಾಲಕರಿಗೆ 10 ಸಾವಿರ ರೂ. ಪರಿಹಾರ ಧನವನ್ನು ರಾಜ್ಯ ಸರ್ಕಾರ ತಕ್ಷಣ ಘೋಷಣೆ ಮಾಡಬೇಕು ಎಂದು ಓಲಾ- ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಒತ್ತಾಯಿಸಿದ್ದಾರೆ.
ಲಾಕ್ ಡೌನ್ ಮುಂದುವರಿಕೆ ಸಂಬಂಧ ಚಾಲಕರ ಪರವಾಗಿ ಪ್ರತಿಕ್ರಿಯೆ ನೀಡಿರುವ ತನ್ವೀರ್ ರಾಜ್ಯದ ಮುಖ್ಯಮಂತ್ರಿಗಳು ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ. ಹಲವಾರು ಜನ ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈಗಾಗಲೇ ಸಂಕಷ್ಟದಿಂದ ಪರಿತಪಿಸುತ್ತಿದ್ದಾರೆ. ಹಲವಾರು ಕಷ್ಟಗಳನ್ನು ತಲೆ ಮೇಲೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಆಟೋ, ಓಲಾ- ಉಬರ್ ಚಾಲಕರು ಸುಮಾರು ಮೂವತ್ತು ದಿನ ಏನೂ ಇಲ್ಲದೆ ಮನೆಯಲ್ಲಿ ಕುಳಿತುಕೊಂಡು ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಮನೆ ಬಾಡಿಗೆ , ಕಾರು, ಆಟೋ ಸಾಲ ಕಟ್ಟುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದ ಕಳ್ಳರಿಂದ ತಮಿಳುನಾಡಲ್ಲಿ ದರೋಡೆ.. ಮಹಾರಾಷ್ಟ್ರದಲ್ಲಿ ಬಂಧನ
ಒಂದು ವಾಹನದ ಮೇಲೆ ಸಂಪೂರ್ಣ ಕುಟುಂಬ ಅವಲಂಬಿತವಾಗಿರುತ್ತದೆ, ಸರ್ಕಾರಕ್ಕೆ ಸ್ವಲ್ಪವಾದರೂ ಪರಿಜ್ಞಾನ ಇರಬೇಕು. ಮತ್ತೆ ಹದಿನಾಲ್ಕು ದಿನಗಳ ಲಾಕ್ಡೌನ್ ಮಾಡಿದ್ದೀರಿ, ಪರಿಹಾರ ಏನು? ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ನೇರ ಪ್ರಶ್ನೆಗಳನ್ನು ತನ್ವೀರ್ ಹಾಕಿದ್ದಾರೆ.
ನೀವು ಕೊಡುವ 3 ಸಾವಿರ ರೂಪಾಯಿಯಲ್ಲಿ, ಬಾಡಿಗೆ ಕಟ್ಟಬೇಕಾ? ಫೈನಾನ್ಸ್ಗೆ ಕೊಡಬೇಕಾ? ಬಡ್ಡಿ ಕಟ್ಟಬೇಕಾ? ಹಾಲಿನ ಅಂಗಡಿಗೆ ಖರ್ಚುಮಾಡಬೇಕಾ? ದಿನಸಿ ತರಲು ಬಳಸಬೇಕಾ? ಎಂದು ಪರಿಹಾರದ ಬಗ್ಗೆ ತನ್ವೀರ್ ವ್ಯಂಗ್ಯವಾಡಿದ್ದಾರೆ.
ತಮ್ಮ ತಪ್ಪುಗಳಿಂದ, ದುರಾಡಳಿತದಿಂದ ಆಗಿರುವಂತಹ ಅವ್ಯವಸ್ಥೆಯನ್ನು ಸರಿಪಡಿಸಿ ತಾವು ಜವಾಬ್ದಾರಿಯನ್ನು ಹೊರಬೇಕು. ದುಡಿದು ದಿನದ ಊಟ ಮಾಡುವಂತಹ ವರ್ಗಗಳಿಗೆ ಸಹಾಯವನ್ನು ಮಾಡಬೇಕು. ನಿಮ್ಮ ತಪ್ಪಿಗೆ, ಬಡ ಜನರನ್ನು, ಬಡ ವರ್ಗವನ್ನು ಬಲಿಹಾಕುವಂತಹದ್ದು ಸರಿಯಲ್ಲ, ದಯವಿಟ್ಟು ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ತನ್ವೀರ್ ಆಗ್ರಹಿಸಿದ್ದಾರೆ.