ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರದ ಜನರಿಗೆ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಖಾಸಗಿ ಕ್ಯಾಬ್ ಸಂಸ್ಥೆಯಾದ ಓಲಾ 50 ಕೋಟಿ ರೂಪಾಯಿಗಳ ಕ್ರೌಡ್ ಫಂಡಿಂಗ್ ಮಾಡಲು ಮುಂದಾಗಿದೆ.
ಈಗಾಗಲೇ ಓಲಾ ಸಮೂಹ ಸಂಸ್ಥೆ ಹಾಗೂ ಉದ್ಯೋಗಿಗಳು ಸೇರಿ 20 ಕೋಟಿ ರೂಪಾಯಿಗಳಷ್ಟು ದೇಣಿಗೆ ನೀಡಿದ್ದು, ಇನ್ನೂ 30 ಕೋಟಿ ರೂಪಾಯಿ ಸಾರ್ವಜನಿಕರಿಂದ ಸಂಗ್ರಹವಾಗಲಿದೆ ಎಂಬ ಅಂದಾಜಿದೆ. ಸಂಗ್ರಹವಾದ ಹಣವನ್ನು ಸಂಕಷ್ಟಕ್ಕೆ ಒಳಗಾದ ಓಲಾ ಸಂಸ್ಥೆಯ ಚಾಲಕರ ಜೀವನ ನಿರ್ವಹಣೆಗೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಚಾಲಕರಿಗೆ ಹಣ ನೀಡದೇ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಪದಾರ್ಥಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಚಾಲಕರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ವಿಮೆ, ಸಾಮಾನ್ಯ ವಿಮೆ ಮಾಡಿಸಲಾಗುತ್ತದೆ. ಇಷ್ಟೇ ಅಲ್ಲದೇ ವಾರಕ್ಕೆ 1,200 ರೂಪಾಯಿಯವರೆಗೆ ಬಡ್ಡಿರಹಿತ ಸಾಲವನ್ನು ಚಾಲಕರಿಗೆ ನೀಡಿ ಆದಾಯಕ್ಕೆ ತಕ್ಕಂತೆ ಸಾಲವನ್ನು ಹಿಂಪಡೆಯಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.