ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಮೂಲಕ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರದಾನ ಮಾಡುವ ನೃಪತುಂಗ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಹಾಗೂ ಸಂಸ್ಕೃತ ವಿವಿ ನಿವೃತ್ತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ನ ಹಾಲಿ ಅಧ್ಯಕ್ಷರಾದ ಡಾ.ಮನು ಬಳಿಗಾರ್ ನೇತೃತ್ವದ ಸಮಿತಿ ಸರ್ವಾನುಮತದಿಂದ ಮಲ್ಲೇಪುರಂ ಅವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ಏಳು ಲಕ್ಷ ರೂಪಾಯಿ ನಗದು ಮೊತ್ತವನ್ನು ಒಳಗೊಂಡಿರಲಿದೆ.
ಕಾವ್ಯ ವಿಮರ್ಶೆ, ಸಂಶೋಧನೆ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಮಲ್ಲೇಪುರಂ ಜಿ ವೆಂಕಟೇಶ್, ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ, ಹೆಸರಾಂತ ವಿಮರ್ಶಕ ಡಾ. ಎಸ್.ಆರ್. ವಿಜಯಶಂಕರ್, ಸಾಹಿತಿ ಡಾ. ಸರಜೂ ಕಾಟ್ಕರ್, ಬಿಎಂಟಿಸಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಮೊಹಮದ್ ಹಫೀಜುಲ್ಲಾ, ಉಪ ಮುಖ್ಯ ಕಲ್ಯಾಣಾಧಿಕಾರಿ ಮಥುರಾ ರಾಡ್ರಿಕ್ಸ್, ಕೆಎಸ್ಆರ್ಟಿಸಿಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಚನ್ನೇಗೌಡ ಸದಸ್ಯರಾಗಿದ್ದರು.
ಮಲ್ಲೇಪುರಂ ಅವರು ಕನ್ನಡ, ಸಂಸ್ಕೃತ ಮತ್ತು ಪಾಲಿ ಭಾಷೆಯಲ್ಲಿ ಸಾಹಿತ್ಯ ಕೃಷಿ ನಡೆಸಿದ್ದಾರೆ. ಸಂಸ್ಕೃತ ವಿವಿ ಕುಲಪತಿಗಳಾಗಿ, ಕನ್ನಡ ವಿವಿ ಕುಲಸಚಿವರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪಾಲಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
2008ರಲ್ಲಿ ಬಿಎಂಟಿಸಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕನ್ನಡದ ಜ್ಞಾನಪೀಠವೆಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧವಾಗಿದೆ. ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿ: ನನ್ನ ಕೊಂದರೂ ಸರಿ ಆಫ್ಘನ್ ತೊರೆಯಲ್ಲ: ಪಟ್ಟು ಹಿಡಿದ ಏಕೈಕ ಹಿಂದೂ ಅರ್ಚಕ