ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಶಕ್ತಿ ತುಂಬಲು ಅವಿಶ್ವಾಸ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಗುತ್ತಲೇ ಕಿಚಾಯಿಸಿದ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು.
ಅವಿಶ್ವಾಸ ನಿರ್ಣಯದ ಬಗ್ಗೆ ಮತ ವಿಭಜನೆ ಬೇಡ ಎಂಬ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯನವರು, ನನಗೆ ವಿಶ್ವಾಸ ತುಂಬಲು ವಿರೋಧ ಪಕ್ಷದ ನಾಯಕರು ಅವಿಶ್ವಾಸ ತಂದಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ಹೌದು. ಅವರಿಗೆ ಶಕ್ತಿ ಕೊಡಲೆಂದೇ ಈ ಅವಿಶ್ವಾಸ ತಂದಿರುವುದು. ನಿಮ್ಮ ಸದಸ್ಯರಲ್ಲೂ ನಿಮ್ಮ ಬಗ್ಗೆ ಕೆಲವರಿಗೆ ವಿಶ್ವಾಸ ಇಲ್ಲ. ಅದಕ್ಕೆ ಅವಿಶ್ವಾಸ ತಂದಿದ್ದೇನೆ ಎಂದರು.
ಕೊರೊನಾ ಸೋಂಕಿನಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ನಾವಿಬ್ಬರೂ ದಾಖಲಾಗಿದ್ದಾಗ ಯಾರ್ಯಾರು ಏನೇನೋ ಮಾತನಾಡಿಕೊಂಡಿದ್ದಾರೆ ಎಂಬ ಬಗ್ಗೆಯೂ ಗೊತ್ತಿದೆ. ನಿಜಕ್ಕೂ ನಾವಿಬ್ಬರೂ ಏನೂ ಮಾತಾಡೇ ಇಲ್ಲ. ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗುವಾಗ ಸಿದ್ದರಾಮಯ್ಯ ಅವರೇ ಹುಷಾರು, ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದರು ಅಷ್ಟೇ.. ಬೇರೇನೂ ಮಾತನಾಡಿಲ್ಲ. ಅದೇನೇ ಇರಲಿ, ನಮ್ಮಿಬ್ಬರ ವೈಯುಕ್ತಿಕ ಸಂಬಂಧ ಚೆನ್ನಾಗಿಯೇ ಇದೆ ಎಂದು ಹೇಳಿದರು.
ಹಿಂದೆ ಯಡಿಯೂರಪ್ಪನವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹೋಗಿ ಅವರ ಬಗ್ಗೆ ಒಳ್ಳೆಯ ಮಾತು ಆಡಿದ್ದೇನೆ. ಬೇರೆ ವಿರೋಧ ಪಕ್ಷದ ನಾಯಕರು ಆ ಕಾರ್ಯಕ್ರಮಕ್ಕೆ ಬರಲಿಲ್ಲ. ನನ್ನದು ಅವರದ್ದೂ ಮೊದಲಿನಂದ ವೈಯುಕ್ತಿಕ ಸಂಬಂಧ ಚೆನ್ನಾಗಿಯೇ ಇದೆ. ರಾಜಕೀಯ ಸಂಬಂಧ ಬೇರೆ. ನಾನು ರಾಜಕೀಯ ಸಂಬಂಧ ಬಂದಾಗ ರಾಜಿ ಮಾಡಿಕೊಳ್ಳುವುದೇ ಇಲ್ಲ ಎಂದರು.