ಬೆಂಗಳೂರು: ಆಯಾ ಜಿಲ್ಲೆಗಳಲ್ಲಿ ಕಂಟೋನ್ಮೆಂಟ್ ಝೋನ್ ಹೊರತುಪಡಿಸಿ ದ್ವಿಚಕ್ರವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ನಿರ್ವಹಣೆ ಸಂಬಂಧ ಸುದೀರ್ಘ ಚರ್ಚೆ ನಡೆಸಿದ್ದೇವೆ. ಕೊರೊನಾ ಪತ್ತೆಯಾದ ಪ್ರದೇಶಗಳನ್ನು ಕಂಟೋನ್ಮೆಂಟ್ ಝೋನ್ ಮಾಡಲು ನಿರ್ಧರಿಸಲಾಗಿದೆ. ಕಂಟೋನ್ಮೆಂಟ್ ಝೋನ್ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಅವರ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ ಎಂದರು.
ಕಂಟೋನ್ಮೆಂಟ್ ವಲಯದಲ್ಲಿ ಒಬ್ಬ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಒಂದನೇ ದರ್ಜೆಯ ಅಧಿಕಾರಿಗಳಿಗೆ ದಂಡಾಧಿಕಾರಿಯ ಅಧಿಕಾರ ನೀಡಲಾಗುತ್ತದೆ. ಅವರು ನಿಯಂತ್ರಣ ವಲಯದಲ್ಲಿ ಗಡಿ ನಿಗದಿ ಮಾಡುವುದು ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ ಎಂದು ಹೇಳಿದರು.
ಇನ್ನು ಕಂಟೋನ್ಮೆಂಟ್ ಝೋನ್ ಹೊರತುಪಡಿಸಿದ ಪ್ರದೇಶದಲ್ಲಿ ದ್ವಿಚಕ್ರವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ. ಕಂಟೋನ್ಮೆಂಟ್ ಝೋನ್ ಬಿಟ್ಟು ಆಯಾ ಜಿಲ್ಲೆಗಳ ಇತರೆ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ. ದ್ವಿಚಕ್ರ ವಾಹನಕ್ಕೆ ಯಾವುದೇ ಪಾಸ್ ಅಗತ್ಯ ಇಲ್ಲವೆಂದು ಎಂದು ಸ್ಪಷ್ಟಪಡಿಸಿದರು.
ಕೈಗಾರಿಕಾ ಚಟುವಟಿಕೆ, ಕಾಮಗಾರಿಗಳ ಉದ್ದೇಶಕ್ಕಾಗಿ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರವನ್ನು ಒಂದು ಜಿಲ್ಲೆಯನ್ನಾಗಿ ಪರಿಗಣಿಸಲಾಗುತ್ತದೆ. ಲಾಕ್ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬೆಂಗಳೂರಲ್ಲಿ 32 ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ. 8 ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತು ಮಾಡಲಾಗಿದೆ. ಏ.20 ರ ಬಳಿಕ ಕಟ್ಟಡ, ಸರ್ಕಾರಿ ಕಾಮಗಾರಿಗಳಿಗೆ ನಿರ್ಬಂಧಿತ ಅವಕಾಶ ನೀಡಲಾಗುತ್ತದೆ. ಐಟಿ ಬಿಟಿ ಕ್ಷೇತ್ರಗಳಲ್ಲಿ ಶೇ.33 ಸಿಬ್ಬಂದಿಗೆ ಕೆಲಸ ಮಾಡಲು ಅನುಮತಿ ನೀಡಲಾಗುತ್ತದೆ. ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇಲ್ಲ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮೇ.3 ರವರೆಗೆ ನಿಷೇಧಾಜ್ಞೆ ಇರಲಿದೆ ಎಂದು ಸಿಎಂ ವಿವರಿಸಿದರು.