ಬೆಂಗಳೂರು: ಕೋವಿಡ್ ರೂಪಾಂತರಿ ಒಮಿಕ್ರಾನ್ ಸೋಂಕು ಹರಡದಂತೆ ತಡೆಯಲು ರಾಜ್ಯ ಸರ್ಕಾರ ಇದೇ ತಿಂಗಳ 19ವರೆಗೆ ವಾರಾಂತ್ಯ ಕರ್ಫ್ಯೂ ಜೊತೆಗೆ ಕೆಲವು ನಿರ್ಬಂಧ ವಿಧಿಸಿತ್ತು. ಇದೀಗ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ.
ಇಂದಿನಿಂದ ಸಾರ್ವಜನಿಕ ಅಂಗಡಿ-ಮುಂಗಟ್ಟು, ಹೋಟೆಲ್, ಪಬ್, ಕ್ಲಬ್-ರೆಸ್ಟೋರೆಂಟ್, ಈಜುಕೊಳ, ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಆಸನಕ್ಕೆ ನಿರ್ಬಂಧ ವಿಧಿಸಿದೆ. ಅದೇ ರೀತಿ ವಾರಾಂತ್ಯ ಕರ್ಫ್ಯೂ ಅವಧಿಯಾದ ಶುಕ್ರವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ರಾಜ್ಯದಲ್ಲಿ ಬಾರ್, ವೈನ್ ಶಾಪ್ ಸೇರಿದಂತೆ ಯಾವುದೇ ರೀತಿಯ ಮದ್ಯದಂಗಡಿ ತೆರೆಯದಂತೆ ಅಬಕಾರಿ ಇಲಾಖೆ ತಿಳಿಸಿದೆ.
ಸೋಮವಾರದಿಂದ ಶುಕ್ರವಾರದವರೆಗೂ ಮದ್ಯದಂಗಡಿಗಳು ನಿಗದಿಪಡಿಸಿದ ಅವಧಿಯಲ್ಲಿ ಕಾರ್ಯನಿರ್ವಹಿಸಬಹುದು. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಆಸನಗಳಿಗೆ ಮೀಸಲಿರಿಸಿ ವ್ಯವಹಾರ ನಡೆಸಬೇಕು. ಮಳಿಗೆಗಳಲ್ಲಿ ಕಡ್ಡಾಯವಾಗಿ ಸಿಬ್ಬಂದಿ ಮಾಸ್ಕ್ ಧರಿಸಬೇಕು. ಪ್ರತಿಯೊಬ್ಬ ಗ್ರಾಹಕರಿಗೂ ಸ್ಯಾನಿಟೈಸರ್ ಆಗುವಂತಹ ವ್ಯವಸ್ಥೆ ಮಾಡಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; ಬೆಂಗಳೂರಿನಲ್ಲಿ ಶಾಲೆಗಳಿಗೆ ರಜೆ- ಹೊಸ ನಿರ್ಬಂಧಗಳು ಹೀಗಿವೆ..