ಬೆಂಗಳೂರು : ಯಾವುದೇ ಸೂಕ್ತ ಆಧಾರಗಳಿಲ್ಲದೆ ಒಬ್ಬರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ನಮ್ಮ ಸರ್ಕಾರ ಯಾವಾಗಲೂ ಪಾರದರ್ಶಕವಾಗಿ ನಡೆದುಕೊಳ್ಳುತ್ತಾ ಬಂದಿದೆ. ಇದಕ್ಕೆ ಕೆಟ್ಟ ಹೆಸರನ್ನು ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಭ್ರಷ್ಟಾಚಾರವನ್ನು ಹುಟ್ಟುಹಾಕಿರುವುದೇ ಕಾಂಗ್ರೆಸ್ ಪಕ್ಷ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದವರು ಏನು ಹೇಳ್ತಾರೆ ಅನ್ನುವುದು ಮುಖ್ಯ ಅಲ್ಲ. ಈ ಪ್ರಕರಣದ ತನಿಖೆಯ ವರದಿ ಬರಲಿ. ನಂತರ ಈ ವಿಚಾರವಾಗಿ ನಮ್ಮ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಡಿವೈಎಸ್ಪಿ ಗಣಪತಿ ವಿಚಾರವೇ ಬೇರೆ, ಸಂತೋಷ್ ಪಾಟೀಲ್ ವಿಚಾರವೇ ಬೇರೆ. ಇಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಸಚಿವ ಕೆ.ಎಸ್. ಈಶ್ವರಪ್ಪರನ್ನು ಗುರಿ ಮಾಡುತ್ತಿದೆ ಎಂಬುದು ನನ್ನ ಭಾವನೆ. ಈಶ್ವರಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಇರುವವರು. ಸದ್ಯಕ್ಕೆ ಈಶ್ವರಪ್ಪ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮಾಡಿದ ಒಳ್ಳೆಯ ಕೆಲಸಗಳಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರ ರಹಿತ ಆಡಳಿತ ಬಿಜೆಪಿಯ ಉದ್ದೇಶ ಎಂದು ಇದೇ ವೇಳೆ ಹೇಳಿದ್ದಾರೆ.
ಓದಿ : ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ಆಗಿದೆ, ಅವರನ್ನು ಕರೆಸಿ ಮಾತಾಡುವೆ; ಸಿಎಂ ಬೊಮ್ಮಾಯಿ