ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮವು ಶನಿವಾರ ರಾತ್ರಿ 09.30 ಗಂಟೆಯಿಂದ ಇಂದಿರಾನಗರ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿದೆ. ಈ ಕಾಮಗಾರಿಯನ್ನು ನಿರ್ವಹಿಸಲು ನೇರಳೆ ಮಾರ್ಗದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ವೇಳಾಪಟ್ಟಿಯ ಪ್ರಕಾರ ಪ್ರಯಾಣಿಕರಿಗೆ ಮೆಟ್ರೋ ಸೇವೆಯು ಎಂ.ಜಿ.ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರಲಿದೆ. ಈ ಸಂಬಂಧ ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದೆ.
ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು ರಾತ್ರಿ 8.30 ಗಂಟೆಗೆ ಹೊರಡುತ್ತದೆ. ಹಾಗೆಯೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 8.30ಕ್ಕೆ ಹೊರಡಲಿದೆ. ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ಮಾರ್ಗದ ರೈಲುಗಳನ್ನು ಸಂಪರ್ಕಿಸಿದ ನಂತರ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಕೊನೆಯ ರೈಲು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರಾತ್ರಿ 9.00 ಗಂಟೆಗೆ ಹೊರಡಲಿದೆ.
ಇದನ್ನೂ ಓದಿ: ತಾಯಿ ಕಲಿತ ಸರ್ಕಾರಿ ಶಾಲೆಗೆ ₹2 ಕೋಟಿ ವ್ಯಯಿಸಿ ಹೈಟೆಕ್ ಸ್ಪರ್ಶ ನೀಡಿದ ಉದ್ಯಮಿ
ಭಾನುವಾರದಂದು ಮಟ್ರೋ ಸೇವೆಯು ನೇರಳೆ ಮಾರ್ಗದಲ್ಲಿ ಪೂರ್ಣವಾಗಿ ಬೆಳಿಗ್ಗೆ 7.00 ಗಂಟೆಯಿಂದ ವೇಳಾಪಟ್ಟಿಯ ಪ್ರಕಾರ ಪುನರಾರಂಭಿಸಲಾಗುತ್ತದೆ. ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ವೇಳಾಪಟ್ಟಿಯ ಪ್ರಕಾರ ರೈಲು ಸೇವೆಯು ಈ ಮಾರ್ಗದಲ್ಲಿ ಲಭ್ಯವಿರುತ್ತದೆ.