ಬೆಂಗಳೂರು: ಡ್ರಗ್ಸ್ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಹಾಲಿನ ಪುಡಿ ಪ್ಯಾಕೆಟ್ ಹಾಗೂ ಡಬ್ಬಿಗಳಲ್ಲಿ ಮಾದಕವಸ್ತು ಇಟ್ಟು ಸಾಗಿಸುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಥಾಮಸ್ ಕಾಲು ಎಂಬಾತನನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 260 ಮಾದಕ ವಸ್ತು, 110 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹಲವು ತಿಂಗಳಿಂದ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಯು ಗ್ರಾಹಕರಿಗೆ ಮಾದಕ ವಸ್ತು ಸರಬರಾಜು ಮಾಡಲು ನೂತನ ತಂತ್ರ ಕಂಡುಕೊಂಡಿದ್ದ. ಪ್ರತಿಷ್ಠಿತ ಖ್ಯಾತ ಕಂಪನಿಯ ಹಾಲಿನ ಪುಡಿ ಪ್ಯಾಕೇಟ್ ಹಾಗೂ ಡಬ್ಬಿಗಳನ್ನು ತರಿಸಿಕೊಂಡು ಒಳಭಾಗದಲ್ಲಿ ಡ್ರಗ್ಸ್ ಇಟ್ಟು ಪ್ಯಾಕ್ ಮಾಡಿ ಸರಬರಾಜು ಮಾಡುತ್ತಿದ್ದ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಅಂಜುಂ ರುಜುಗೆ ಬುಲಾವ್ ನೀಡಿದ ಖಾಕಿ:
ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿ, ಮೊಬೈಲ್ ಜಪ್ತಿ ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದಾಗ ಮತ್ತೊಂದು ಅಂಶ ಬಯಲಾಗಿದೆ. ಪ್ರತಿಷ್ಠಿತ ಪ್ರೆಸ್ಟೀಜ್ ಕಂಪನಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಅಂಜುಂ ರುಜುಗೆ ಡ್ರಗ್ಸ್ ನಂಟು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ಆಕೆಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉತ್ತುಂಗದಲ್ಲಿರುವ ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುವ ಪ್ರೆಸ್ಟೀಜ್ ಕಂಪನಿ ಮಾಲೀಕ ಇರ್ಫಾನ್ ರಜಾಕ್ ತಂಗಿ ಅಂಜುಂ ರುಜು ಆಗಿದ್ದಾರೆ. ಇವರು ವಾಟ್ಸಾಪ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಅಂಜುಂ ಗೆ ನೋಟಿಸ್ ನೀಡಿರುವ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
8 ಕೆ.ಜಿ ಗಾಂಜಾ ವಶಕ್ಕೆ, ಇಬ್ಬರ ಬಂಧನ:
ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ, 8 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ದೊರೆತಿತ್ತು. ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿ, 8 ಕೆ.ಜಿ 16 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.