ಬೆಂಗಳೂರು: ರಾಜ್ಯದಲ್ಲಿ ಖೋಟಾ ನೋಟು ಜಾಲದಲ್ಲಿ ತೊಡಗಿಸಿಕೊಂಡು ದೇಶದ ಆರ್ಥಿಕತೆಗೆ ಕೊಡಲಿ ಪೆಟ್ಟು ನೀಡುತ್ತಿದ್ದ ಆರೋಪಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬೆಂಗಳೂರಿನ ಎನ್ಐಐ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದೆ.
ಪಶ್ಚಿಮ ಬಂಗಾಳ ಮಾಲ್ಡಾ ಜಿಲ್ಲೆಯ ಜಹೀರುದ್ದೀನ್ನನ್ನು ಕಳೆದ ಜೂನ್ನಲ್ಲಿ ಎನ್ಐಎ ಬಂಧಿಸಿತ್ತು. ವಿಚಾರಣೆ ಮುಗಿದು ಹೆಚ್ಚುವರಿಯಾಗಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಬಾಂಗ್ಲಾದೇಶದಿಂದ ನಕಲಿ ನೋಟುಗಳನ್ನು ಅಕ್ರಮವಾಗಿ ರಾಜ್ಯದಲ್ಲಿ ಚಲಾವಣೆ ಮಾಡುತ್ತಿದ್ದ ಆರೋಪದಡಿ 2018 ರಲ್ಲಿ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ 4.34 ಲಕ್ಷ ರೂ. ನಕಲಿ ಹಣ ಜಪ್ತಿ ಮಾಡಿ ಮೂವರನ್ನ ಬಂಧಿಸಿದ್ದರು.
ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಎನ್ಐಎ, ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ತನಿಖೆ ವೇಳೆ ಜಹೀರುದ್ದೀನ್ ಪಾತ್ರ ಬಯಲಾಗಿತ್ತು. ಬಾಂಗ್ಲಾ ಮೂಲದ ವ್ಯಕ್ತಿಗಳಿಂದ ಈತ ನಕಲಿ ನೋಟು ಪಡೆದು ಸಬೀರುದ್ದೀನ್ ಹಾಗೂ ಸಜ್ಜಾದ್ ಅಲಿ ಎಂಬಾತನ ಮೂಲಕ ದೇಶದ ವಿವಿಧೆಡೆ ಸರಬರಾಜು ಮಾಡುತ್ತಿದ್ದ. ಕ್ರಿಮಿನಲ್ ಒಳಸಂಚು, ನಕಲಿ ನೋಟು ಚಲಾವಣೆ ಆರೋಪದಡಿ ಆರೋಪಿ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.