ಬೆಂಗಳೂರು : ಜನಿಸುತ್ತಲೇ ಅರ್ಧದಷ್ಟು ಕರುಳಿನ ಗ್ಯಾಂಗ್ರೀನ್‍ಗೆ ತುತ್ತಾಗಿ ಪ್ರಾಣಾಪಾಯ ಎದುರಿಸುತ್ತಿದ್ದ ಮಗುವಿಗೆ ಬನ್ನೇರುಘಟ್ಟ ರಸ್ತೆಯ ರೈನ್ ಬೋ ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈಗ ಆ ಮಗು ಆರೋಗ್ಯವಾಗಿದೆ.
ಇದೊಂದು ಅಪರೂಪದ ಪ್ರಕರಣ. ವೈದ್ಯರ ಸಮಯಪ್ರಜ್ಞೆ ಮತ್ತು ಅನುಭವಕ್ಕೆ ಸವಾಲಾಗಿತ್ತು. 33 ವಾರಗಳ 28 ವರ್ಷದ ಗರ್ಭಿಣಿಯೊಬ್ಬರು, ಹೊಟ್ಟೆಯಲ್ಲಿ ಮಗು ಮಿಸುಕಾಡುತ್ತಿರುವ ಅನುಭವವಾಗುತ್ತಿಲ್ಲ ಎಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ರೈನ್ ಬೋ ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ವೈದ್ಯರು ತಕ್ಷಣ ಗರ್ಭಿಣಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ಗರ್ಭದಲ್ಲಿರುವ ಶಿಶುವಿನ ಕರುಳಿನಲ್ಲಿ ಅಸಹಜ ಹಿಗ್ಗುವಿಕೆ ಜೊತೆಗೆ ಅನೇಕ ಗಂಟುಗಳು ಇದ್ದುದನ್ನು ಕಂಡು ಕೊಂಡರು.
ಹೊಟ್ಟೆಯ ಮಧ್ಯಭಾಗದಲ್ಲಿ ಆ ಗಂಟುಗಳು ಸುಮಾರು 20 ಎಂಎಂನಷ್ಟು ಗಾತ್ರದಲ್ಲಿದ್ದವು. ಈ ಸ್ಕ್ಯಾನಿಂಗ್‍ನಲ್ಲಿ ಸಣ್ಣ ಕರುಳಿಗೆ ಸಂಬಂಧಿಸಿದಂತೆ ಕೆಲ ಸಂಕೀರ್ಣ ಆರೋಗ್ಯ ಸಮಸ್ಯೆಗಳನ್ನ ಪತ್ತೆ ಹಚ್ಚುವಲ್ಲಿ ವೈದ್ಯರು ಯಶಸ್ವಿಯಾದರು. ಆಗ ಮುಂದಾಗುವ ಅನಾಹುತ ಮನವರಿಕೆಯಾಗಿ ಕೂಡಲೇ ಮರುದಿನವೇ ತಾಯಿಗೆ ಶಸ್ತ್ರಚಿಕಿತ್ಸೆ ಮಾಡಿ ಮಗು ಹೊರ ತೆಗೆಯಲೇಬೇಕು ಎಂದು ನಿರ್ಧರಿಸಿದರು.
ಈ ಕುರಿತು ಮಾತನಾಡಿದ ಬನ್ನೇರುಘಟ್ಟ ರಸ್ತೆಯ ರೈನ್ ಬೋ ಮಕ್ಕಳ ಆಸ್ಪತ್ರೆಯ ಶಿಶು ತಜ್ಞ ಡಾ. ಮುಕುಂದ ರಾಮಚಂದ್ರ, ಇದೊಂದು ಕ್ಲಿಷ್ಟ ಸಂದರ್ಭವಾಗಿತ್ತು. ಆಕೆ 8 ತಿಂಗಳ ಗರ್ಭಿಣಿಯಾಗಿದ್ದರು. ಮಗುವಿನ ಆರೋಗ್ಯದ ದೃಷ್ಟಿಯಿಂದ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲೇಬೇಕಾಯಿತು. 2.4 ಕೆಜಿ ತೂಕದ ಗಂಡು ಮಗುವಿಗೆ ಹುಟ್ಟಿದ ತಕ್ಷಣ ಕೃತಕ ಉಸಿರಾಟದ ನೆರವು ನೀಡಲಾಯಿತು. ಉಸಿರಾಟ ಸಹಜ ಸ್ಥಿತಿಗೆ ಬಂದ ನಂತರ ಮಕ್ಕಳ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಆರಂಭಿಸಲಾಯಿತು.
ಮತ್ತೊಮ್ಮೆ ಮಗುವಿಗೆ ಸಾಮಾನ್ಯ ಎಕ್ಸ್ ರೇ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ಈ ಮೊದಲೇ ಸಣ್ಣ ಕರುಳಿನಲ್ಲಿ ಕಾಣಿಸಿದ್ದ ಸಮಸ್ಯೆಗಳ ಬಗ್ಗೆ ವೈದ್ಯರ ಲೆಕ್ಕಾಚಾರ ನಿಜವಾಗಿತ್ತು. ಕರುಳು ಊದಿಕೊಳ್ಳುವುದರ ಜೊತೆಗೆ ಸಾಕಷ್ಟು ಗಂಟು ಹಾಕಿಕೊಂಡಿತ್ತು. ಹಾಗೇ ಬಿಟ್ಟಿದ್ದರೆ ಕೆಲವೇ ಗಂಟೆಗಳಲ್ಲಿ ಮಗುವಿನ ಪ್ರಾಣಕ್ಕೆ ಕುತ್ತು ಬರುವ ಅಪಾಯ ಖಾತ್ರಿಯಾಗಿತ್ತು. ಹೀಗಾಗಿ, ನಮ್ಮ ವೈದ್ಯರು ಮಗುವಿನ ಆರೋಗ್ಯದ ಸೂಕ್ಷ್ಮವನ್ನು ಪಾಲಕರಿಗೆ ಮನವರಿಕೆ ಮಾಡಿಕೊಟ್ಟು, ಶಸ್ತ್ರಚಿಕಿತ್ಸೆಗೆ ಸಜ್ಜಾದರು. ಕೊಳೆತಂತಾಗಿದ್ದ ಸಣ್ಣ ಕರುಳಿನ ಅರ್ಧದಷ್ಟು ಭಾಗವನ್ನು ಕತ್ತರಿಸಿ ತೆಗೆದು, ಉಳಿದರ್ಧ ಭಾಗವನ್ನ ಕೃತಕವಾಗಿ ರೂಪಿಸಿದ್ದ ಮಾರ್ಗಕ್ಕೆ ಜೋಡಿಸಲಾಯಿತು ಎಂದರು.
ಮಗು ಜನಿಸಿದ ಕೇವಲ 5 ತಾಸಿಗೆ ಶಸ್ತ್ರಚಿಕಿತ್ಸೆಗೆ ತೆಗೆದುಕೊಂಡು ಹೋಗಲಾಯಿತು. ಈ ರೀತಿ ಗಂಟುಗಳು ಮತ್ತು ಊತಕ್ಕೆ ಕಾರಣ ಹೊಟ್ಟೆ ಅಥವಾ ಸಣ್ಣ ಕರುಳಿನಲ್ಲಿ ಹರ್ನಿಯೇಷನ್ ಉಂಟಾಗಿದ್ದರಿಂದ ರಕ್ತ ಪರಿಚಲನೆಯಲ್ಲಿ ಸಾಕಷ್ಟು ಅಡಚಣೆಯುಂಟಾಗಿ ಅದು ಗ್ಯಾಂಗ್ರೀನ್ ರೂಪಕ್ಕೆ ತಿರುಗಿಕೊಂಡಿತ್ತು. ಹಾಗೇ ಗಂಟು ಗಂಟಾದ ಭಾಗವನ್ನು ವೈದ್ಯರು ಸರಿಪಡಿಸಿ ಅಳೆದು ನೋಡಿದಾಗ ಅದು ಸುಮಾರು 150ಸೆಂ.ಮೀ.ನಷ್ಟು ಉದ್ದವಿತ್ತು. ಅದರಲ್ಲಿ ಅರ್ಧದಷ್ಟು, ಅಂದರೆ 75 ಸೆಂ.ಮೀ.ನಷ್ಟು ಭಾಗ ಸಂಪೂರ್ಣವಾಗಿ ಕೊಳೆತು ಹೋಗಿತ್ತು.
ಆದರೆ, ಅದೃಷ್ಟವಶಾತ್ ಮುಖ್ಯವಾದ 5ಸೆಂ.ಮೀ ನಷ್ಟು ಭಾಗಕ್ಕೆ ಯಾವುದೇ ತೊಂದರೆಯಾಗದೆ ಅದು ಆರೋಗ್ಯಕರವಾಗಿತ್ತು. ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಮಗುವನ್ನು 16 ಗಂಟೆಗಳ ಕಾಲ ವೆಂಟಿಲೇಟರ್ನಲ್ಲಿರಿಸಲಾಯಿತು. ಎರಡು ದಿನಗಳ ನಂತರ ಕೃತಕ ಉಸಿರಾಟದಿಂದಲೂ ಮಗುವನ್ನು ಹೊರ ತೆಗೆಯಲಾಯಿತು. ನಾಲ್ಕು ದಿನಗಳ ನಂತರ ಮಗು ತಾಯಿಯ ಎದೆಹಾಲು ಕುಡಿಯಲಾರಂಭಿಸಿತು. 10ನೇ ದಿನ ಮಗುವನ್ನು ಆಸ್ಪತ್ರೆಯಿಂದ ಕಳುಹಿಸಿಕೊಡಲಾಯಿತು.
ಸದ್ಯ ಮಗುವಿಗೆ ಒಂದು ವರ್ಷ ತುಂಬಿದೆ. ಶಸ್ತ್ರಚಿಕಿತ್ಸೆ ಮಾಡಿದ್ದ ಭಾಗ ಸಹಜವಾಗಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದೆ. ಸೂಕ್ತ ಸಮಯದಲ್ಲಿ ವೈದ್ಯರು ತೆಗೆದುಕೊಂಡ ನಿರ್ಧಾರದಿಂದಾಗಿಯೇ ಮಗುವಿನ ಪ್ರಾಣ ರಕ್ಷಣೆಯಾಗಿದೆ.