ಬೆಂಗಳೂರು: ಭೂ ದಾಖಲೆಗಳ ದತ್ತಾಂಶ ಸಾಫ್ಟ್‌ವೇರ್ ಹ್ಯಾಕ್ ಆಗುವುದನ್ನು ನಿಯಂತ್ರಿಸಲು ಹಾಗೂ ಆಸ್ತಿ ನೋಂದಣಿ ಆನ್‌ಲೈನ್ ವ್ಯವಸ್ಥೆಯನ್ನು ಸದೃಢಗೊಳಿಸಲು ನವೆಂಬರ್ನಿಂದ ರಾಜ್ಯದಲ್ಲಿ ಎಲ್ಲಾ ಆಸ್ತಿ ನೋಂದಣಿಗೆ ಒಟಿಪಿ ಆಧಾರಿತ ಸೇವೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆಸ್ತಿ ನೋಂದಣಿ ವೇಳೆ ನಡೆಯುವ ಅಕ್ರಮ ಹಾಗೂ ಇತರ ಅವ್ಯವಹಾರಗಳನ್ನು ತಡೆಯಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಭೂ ದಾಖಲೆಗಳ ದತ್ತಾಂಶ ಒಳಗೊಂಡಿದ್ದ ಕಾವೇರಿ ಸಾಫ್ಟ್‌ವೇರ್ ಹ್ಯಾಕ್ ಆದ ಬೆನ್ನಲ್ಲೇ ಆಸ್ತಿ ನೋಂದಣಿಗೆ ಒಟಿಪಿ ಆಧಾರಿತ ಸೇವೆ ಆರಂಭಿಸಲಾಗುತ್ತಿದೆ.
ಒಟಿಪಿ ಜತೆಗೆ ಆಸ್ತಿಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳ ಸ್ಕ್ಯಾನ್ಡ್ ಪ್ರತಿಯನ್ನೂ ಅಪ್ಲೋಡ್ ಮಾಡುವುದು ಕಡ್ಡಾಯ. ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಒಟಿಪಿ ವ್ಯವಸ್ಥೆ ಆರಂಭಿಸಲಾಗಿತ್ತು. ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನೋಂದಣಿ ಕಚೇರಿಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಈ ಹೊಸ ಒಟಿಪಿ ವ್ಯವಸ್ಥೆ ಜಾರಿಗೆ ಬರಲಿದೆ.
ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಇಲಾಖೆ ನಿತ್ಯ 30,000ಕ್ಕೂ ಅಧಿಕ ಎಸ್ಎಂಎಸ್ಗಳನ್ನು ಆಸ್ತಿ ನೋಂದಣಿ ಮಾಡುವವರಿಗೆ ಕಳುಹಿಸಲಾಗುತ್ತದೆ. ನಿತ್ಯ ರಾಜ್ಯಾದ್ಯಂತ ಸುಮಾರು 10,000ಕ್ಕೂ ಅಧಿಕ ಆಸ್ತಿಗಳನ್ನು ನೋಂದಾಯಿಸಲಾಗುತ್ತಿದೆ.
ಡಿಸೆಂಬರ್‌ನಲ್ಲಿ ಅಕ್ರಮ ಪತ್ತೆ: ಕುಮಾರಸ್ವಾಮಿ ಸರ್ಕಾರ ಆಸ್ತಿ ನೋಂದಣಿ ಸಲುವಾಗಿ ಕಾವೇರಿ ಆನ್‌ಲೈನ್ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿತ್ತು. ಈ ವೆಬ್ಸೈಟ್ ಮೂಲಕ ಆಸ್ತಿ ನೋಂದಣಿ ಮಾಡಬಹುದಾಗಿತ್ತು. ಆ ಮೂಲಕ ಸಾರ್ವಜನಿಕರು ನಿತ್ಯ ಆಸ್ತಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಸುತ್ತಾಡುವುದನ್ನು ತಪ್ಪಿಸಲು ಈ ಸೇವೆ ಆರಂಭಿಸಲಾಗಿತ್ತು.
ಕಳೆದ ಡಿಸೆಂಬರ್‌ನಲ್ಲಿ ಕಾವೇರಿ ಆನ್‌ಲೈನ್ ವ್ಯವಸ್ಥೆ ಮೂಲಕ ದಾಖಲಾತಿಗಳ ಅದಲು-ಬದಲು ಮಾಡಿ ವಂಚನೆ ನಡೆದಿರುವ 300 ಪ್ರಕರಣಗಳು ಪತ್ತೆಯಾಗಿದ್ದವು. ಇದು ಆಂತರಿಕ ತನಿಖೆ ವೇಳೆ ಬಯಲಿಗೆ ಬಂದಿತ್ತು. ಅದಾದ ಬಳಿಕ ಸಾಫ್ಟ್‌ವೇರ್ ಲೋಪದೋಷಗಳನ್ನು ನಿವಾರಿಸಲಾಗುತ್ತಿದೆ. ಇಲಾಖೆಯಲ್ಲಿ ವಂಚನೆ ಮಾಡಿದವರನ್ನೂ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದೆ. ಬಹುತೇಕ ಬೆಂಗಳೂರಿನಲ್ಲೇ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಮೈಸೂರು, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಈ ವಂಚನೆ ಪತ್ತೆಯಾಗಿದ್ದು, ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.