ಬೆಂಗಳೂರು: ಒಂದೇ ಸೂರಿನಡಿ ನೂರಾರು ಸೇವೆಗಳನ್ನು ಒದಗಿಸುವ ಯೋಜನೆಯನ್ನು ಅಂಚೆ ಇಲಾಖೆ ಜಾರಿಗೆ ತಂದಿದೆ. ಇದರಿಂದ ಗ್ರಾಮೀಣ ಹಾಗೂ ನಗರ ಜನರಿಗೆ ಅನುಕೂಲವಾಗಲಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ತಿಳಿಸಿದ್ದಾರೆ.
ನಗರದ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಅವರು, ಜನಸೇವಾ ಕೇಂದ್ರ ಮೂಲಕ ನೂರಕ್ಕೂ ಹೆಚ್ಚು ಸರ್ಕಾರದ ಯೋಜನೆಗಳನ್ನು ಈ ಮೂಲಕ ಪಡೆಯಬಹುದಾಗಿದೆ. ಪ್ರಮುಖವಾಗಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಆಯುಷ್ಮಾನ್ ಭಾರತ), ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ, ಪ್ರಧಾನಮಂತ್ರಿ ಲಘು ವ್ಯಾಪಾರಿ ಮನ್ ಧನ್ ಯೋಜನೆ, ನ್ಯಾಷನಲ್ ಪೆನ್ಶನ್ ಸ್ಕೀಮ್, ಪಾನ್ ಕಾರ್ಡ್ ಸೇರಿದಂತೆ ಹಲವು ಯೋಜನೆಗಳನ್ನು ಈ ಕೇಂದ್ರದ ಮೂಲಕ ಪಡೆಯಬಹುದಾಗಿದೆ. ರಾಜ್ಯಾದ್ಯಂತ ಇರುವ 851 ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ತಿಳಿಸಿದರು.
ಇದಲ್ಲದೆ ಡಿಜಿಟಲ್ ಸೇವಾ ಪೋರ್ಟಲ್ ಆರಂಭಿಸಿದ್ದು, ಇದರಲ್ಲಿ ಪಾನ್ ಕಾರ್ಡ್ ಪಾಸ್‌ಪೋರ್ಟ್ ಸೇರಿದಂತೆ 14 ಯೋಜನೆಗಳು ಲಭ್ಯವಿದೆ. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವುದು ಹಾಗೂ ತಿದ್ದುಪಡಿ, ಪಿಂಚಣಿ ಉದ್ಯೋಗ, ಐಟಿ ರಿಟರ್ನ್, ವಿಮೆ ಫಾಸ್ಟ್‌ಟ್ಯಾಗ್ ಸೇರಿದಂತೆ ಹಲವು ಪ್ರಯೋಜನಗಳು ಒಂದೇ ಸೂರಿನಡಿ ಲಭ್ಯವಿದೆ. ಬೆಂಗಳೂರಿನ ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಯಲ್ಲಿ ಕಿಯೋಸ್ಕ್ ಅಳವಡಿಸಲಾಗಿದ್ದು, ಪಾರ್ಸಲ್ ಗಳನ್ನು ವೇಗವಾಗಿ ಬುಕಿಂಗ್ ಮಾಡಬಹುದಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಈಗಾಗಲೇ 162 ಮಂದಿ ಸೇವೆ ಪಡೆದಿದ್ದಾರೆ ಎಂದು ತಿಳಿಸಿದರು. ಆರಂಭಿಸಿರುವ ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೋಸ್ಟ್ ಇನ್ಫೋ ಆಪ್ ಹಾಗೂ DakPay UPI App ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದರು.