ಬೆಂಗಳೂರು : ಇಂಥದ್ದೇ ಖಾತೆಗಳನ್ನು ನೀಡಬೇಕೆಂದು ಸಿಎಂ ಯಡಿಯೂರಪ್ಪನವರ ಮೇಲೆ ಒಳಗೊಳಗೆ ನೂತನ ಸಚಿವರು ಒತ್ತಡ ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಮತ್ತೆ ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚಿಸಿ ಖಾತೆ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಾತೆ ಹಂಚಿಕೆ ಸಂಬಂಧ ತಾವು ದೆಹಲಿಗೆ ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿರುವ ಸಿಎಂ ಯಾವ ಸಚಿವರಿಗೆ ಯಾವ ಖಾತೆಗಳನ್ನು ನೀಡಬೇಕೆಂಬ ಪಟ್ಟಿ ಸಿದ್ಧವಾಗಿದೆ. ಸಚಿವ ಸಂಪುಟಕ್ಕೆ ಸೇರಿರುವ ಹತ್ತು ಮಂದಿಗೆ ಸೋಮವಾರ ಖಾತೆಗಳನ್ನು ಹಂಚಿಕೆ ಮಾಡುವುದಾಗಿ ಇಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಖಾತೆ ಹಂಚಿಕೆ ಸಮಸ್ಯೆ ಜಟಿಲವಾಗಿರುವುದರಿಂದ ಯಡಿಯೂರಪ್ಪನವರು ನಾಳೆ ದೆಹಲಿಗೆ ಹೋಗುವ ನಿರೀಕ್ಷೆ ಇದೆ. ಇನ್ನೊಂದೆಡೆ 16 ಸಚಿವರ ಬಳಿ ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆಯಲಾಗುತ್ತಿದೆ. ಬಾಕಿ ಇರುವ ಕೆಲಸಗಳನ್ನು ಶೀಘ್ರ ಮುಗಿಸಿಕೊಳ್ಳುವಂತೆಯೂ ಸಿಎಂ ಸೂಚಿಸಿದ್ದಾರೆ.
ಜಲಸಂಪನ್ಮೂಲ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದು, ಅವರಿಗೆ ಆ ಖಾತೆ ಕೊಡಲು ಬಿಜೆಪಿ ಒಲವು ತೋರಿಸಿಲ್ಲ. ಗೃಹ ಖಾತೆ ಹೊಂದಿರುವ ಬಸವರಾಜ ಬೊಮ್ಮಾಯಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿ, ಗೃಹ ಖಾತೆಯನ್ನು ಬೇರೆಯವರಿಗೆ ನೀಡಬೇಕೆಂಬುದರ ಬಗ್ಗೆ ಚರ್ಚೆ ನಡೆದಿವೆ. ಈ ಮಧ್ಯೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಬಿ ಸಿ ಪಾಟೀಲ್ ಗೃಹ ಖಾತೆ ಮೇಲೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಖಾತೆಗೂ ಹೆಚ್ಚು ಡಿಮ್ಯಾಂಡ್ ಇದೆ. ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್ ಹಾಗೂ ಕೆ. ಗೋಪಾಲಯ್ಯ ಅವರು ಆ ಖಾತೆ ಮೇಲೆ ಆಸಕ್ತಿ ಹೊಂದಿದ್ದಾರೆ. ಡಾ. ಕೆ. ಸುಧಾಕರ್ ಅವರು ಉನ್ನತ ಶಿಕ್ಷಣ ಅಥವಾ ಇಂಧನ ಖಾತೆಗಾಗಿ ಲಾಬಿ ಮಾಡ್ತಿದ್ದಾರೆ. ಅದೇ ರೀತಿ ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ ಹಾಗೂ ಅರಣ್ಯ ಸೇರಿ ಪ್ರಮುಖ ಖಾತೆಗಳ ಮೇಲೆ ನೂತನ ಸಚಿವರು ಆಸಕ್ತಿ ತಳಿದಿದ್ದಾರೆಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಮೊದಲ ಬಾರಿ ಸಚಿವರಾದವರಿಗೆ ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಕಡಿಮೆ. ಆದರೆ, ಈಗ ಖಾತೆ ಹಂಚಿಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಸಿಎಂ ಹೇಗೆ ಬಗೆಹರಿಸುತ್ತಾರೆ ಎಂಬುದೇ ಕುತೂಹಲದ ಸಂಗತಿ.