ಬೆಂಗಳೂರು: ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಆರಂಭಗೊಳ್ಳುತ್ತಿದ್ದು, ನಾಳೆ ನೂತನ ಲ್ಯಾಬ್ಗೆ ಚಾಲನೆ ನೀಡಲಾಗುತ್ತಿದೆ.
![New Kovid Test Lab Launches at Chamarajanagar tomorrow](https://etvbharatimages.akamaized.net/etvbharat/prod-images/kn-bng-13-sudhakar-tweer-about-corona-test-lab-inauguration-script-7208080_05052020212725_0505f_1588694245_121.jpg)
ಹಿಂದೆ ನೀಡಿದ ಭರವಸೆಯಂತೆ ಚಾಮರಾಜನಗರ ಜಿಲ್ಲೆ ತನ್ನದೇ ಆದ RT-PCR ಕೋವಿಡ್-19 ಪರೀಕ್ಷಾ ಪ್ರಯೋಗಾಲಯವನ್ನು ಹೊಂದಲಿದೆ. ಮೇ 6ರಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಈ ಸೌಲಭ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ವಿರುದ್ಧ ಕರ್ನಾಟಕ ಆರೋಗ್ಯಕರ ಪ್ರವೃತ್ತಿ ತೋರುತ್ತಿದ್ದು, ಒಟ್ಟು ಸಕ್ರಿಯ ಸೋಂಕಿತ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು ಹೆಚ್ಚುತ್ತಿವೆ. ಇಂದು ಸಂಜೆಯ ಹೊತ್ತಿಗೆ ಗುಣಮುಖರಾದವರು 331, ಸಕ್ರಿಯ ಪ್ರಕರಣಗಳು 312. ಕರ್ನಾಟಕದ ಚೇತರಿಕೆ ಸರಾಸರಿ 49.18%ರಷ್ಟಿದ್ದು, ರಾಷ್ಟ್ರೀಯ ಚೇತರಿಕೆ ಸರಾಸರಿ (27.41%) ಗಿಂತ ಉತ್ತಮವಾಗಿದೆ.
ತಜ್ಞರು ಹೇಳುವಂತೆ ಕೊರೋನಾ ನಿಯಂತ್ರಣಕ್ಕೆ ಅತಿ ಮುಖ್ಯವಾದ 3 ವಿಧಾನಗಳೆಂದರೆ ಪರೀಕ್ಷೆ, ಪರೀಕ್ಷೆ ಮತ್ತು ಪರೀಕ್ಷೆ. ಸಿಎಂ ಬಿ.ಎಸ್.ಯಡಿಯೂರಪ್ಪ ಸಮರ್ಥ ನಾಯಕತ್ವದಲ್ಲಿ ರಾಜ್ಯ ತನ್ನ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಏಪ್ರಿಲ್ 7ರಂದು ಪ್ರತಿ ಮಿಲಿಯನ್‌ಗೆ 95 ಪರೀಕ್ಷೆಗಳಿಂದ, ಮೇ 4ರಂದು ಮಿಲಿಯನ್‌ಗೆ 1137 ಪರೀಕ್ಷೆ ಮಾಡಿದ್ದೇವೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.