ಬೆಂಗಳೂರು: ನಾಯಕತ್ವ ವಿಚಾರದ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ಮಾಡುತ್ತೇವೆ. ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಒಟ್ಟಾಗಿ 150 ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ನಾಯಕತ್ವ ಗೊಂದಲ ಇಲ್ಲ. ಮುಂದಿನ ಚುನಾವಣೆಗೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೋಗುತ್ತೇವೆ. ಹಾಗಾಗಿ ಬದಲಾವಣೆ ಆಗಲಿದ್ದಾರೆ ಅನ್ನುವ ಭ್ರಮೆಯನ್ನು ಯಾರೂ ಇಟ್ಟುಕೊಳ್ಳಬಾರದು. ಭ್ರಮೆಯಲ್ಲಿರುವವರು ಮೊದಲು ಭ್ರಮೆಯಿಂದ ಹೊರಗೆ ಬನ್ನಿ ಎಂದರು.
ಯತ್ನಾಳ್ಗೆ ಎಚ್ಚರಿಕೆ: ಭ್ರಮೆ, ಆಸೆ ಮತ್ತು ಹುಚ್ಚಿನಲ್ಲಿ ಇದ್ದರೆ ಅದನ್ನು ಬಿಟ್ಟು ಬಿಡಿ ಎಂದು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರಿಗೆ ಕಟೀಲ್ ಎಚ್ಚರಿಕೆ ರವಾನಿಸಿದರು. ಯಾರು ಈ ರೀತಿಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೋ ಅವರಿಗೆ ಇದು ಸ್ಪಷ್ಟ ಸಂದೇಶ ರವಾನಿಸಿದಂತಾಗಿದೆ. ಪಾರ್ಟಿಯಲ್ಲಿ ಆಗಲಿ, ಸರ್ಕಾರದಲ್ಲಿ ಆಗಲಿ ನಾಯಕತ್ವದ ಗೊಂದಲಗಳು ಇಲ್ಲ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ನಾವೆಲ್ಲಾ ಒಂದಾಗಿ ಚುನಾವಣೆ ಎದುರಿಸುತ್ತೇವೆ. ಯಡಿಯೂರಪ್ಪನವರು ಪ್ರಮುಖರು. ಆದರೆ, ಯಾರಾದರೂ ಭ್ರಮೆಯಲ್ಲಿ ತೇಲಾಡುತ್ತಿದ್ದರೆ, ಆಸೆ ಮತ್ತು ಹುಚ್ಚಿನಲ್ಲಿ ಇದ್ದರೆ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಕಟೀಲ್ ಟಾಂಗ್ ನೀಡಿದರು.
ನಿಮಗೆ ಬೇಡ ಅಂದ್ರೆ ನನ್ನ ತೆಗೆದುಬಿಡಿ: ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ನಿಮಗೆ ಅಷ್ಟು ಆತುರ ಇದ್ದರೆ ಈಗಲೇ ತೆಗೆದುಬಿಡಿ ಎಂದು ಮಾಧ್ಯಮದವರ ಕಾಲೆಳೆದರು.
ಇದನ್ನೂ ಓದಿ: ಕೋಮು ಸೌಹಾರ್ದತೆ ಕದಡುವವರ ಮುಂದೆ ತಲೆಬಾಗುವುದಿಲ್ಲ: ಸಿಎಂ ದೀದಿ ಗುಡುಗು