ಬೆಂಗಳೂರು: ಬಿಜೆಪಿಯ ಆಂತರಿಕ ಸಭೆಯಲ್ಲಿ ಆಡಿಯೋ ಮಾಡಿ ಬಹಿರಂಗ ಮಾಡಿರುವ ಕುರಿತು ಆಂತರಿಕ ತನಿಖೆ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಸಂಬಂಧ ಎಲ್ಲವನ್ನೂ ಹೊರಗೆ ತರುತ್ತೇವೆ. ಯಡಿಯೂರಪ್ಪ ಆಡಿಯೋ ಮಾಡಿದ್ದು ಬಿಜೆಪಿಯವ್ರೇ ಅಂತ ಸ್ಪಷ್ಟ ಆಗಿಲ್ಲ. ಆಡಿಯೋ ಮಾಡಿದವ್ರು ಬಿಜೆಪಿ ಕಾರ್ಯಕರ್ತರೇ ಅಂತ ಎಲ್ಲಿ ಸ್ಪಷ್ಟವಾಗಿದೆ? ಪಕ್ಷದ ಕಡೆಯಿಂದ ಆಡಿಯೋ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆಡಿಯೋ ಬಗ್ಗೆ ನಾವು ಚಿಂತೆ ಮಾಡ್ತಿಲ್ಲ. ಆಡಿಯೋದಿಂದ ಲಾಭ ಪಡೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರ ಕಥೆ ನರಿಯ ಕಥೆಯಂತಾಗಿದೆ. ಈ ಸರ್ಕಾರ ಬಿದ್ರೆ ನಾನು ಸಿಎಂ ಆಗ್ತೀನಿ ಅಂತ ಅಂದುಕೊಂಡಿದ್ದಾರೆ. ಇದು ಅವರ ಹಗಲು ಕನಸು. ಆಡಿಯೋ ವಿರುದ್ಧ ಕಾಂಗ್ರೆಸ್ ಕಾನೂನು ಸಮರ ಮಾಡಲಿ. ಸಿದ್ದರಾಮಯ್ಯ ಕಾನೂನನ್ನ ಸರಿಯಾಗಿ ತಿಳಿದುಕೊಂಡಿಲ್ಲ. ಸುಳ್ಳು ಪ್ರಚಾರ ಮಾಡಲು ಹೊರಟಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಲ್ಲ. ಕಾನೂನು ತನ್ನದೇ ಆದ ನ್ಯಾಯ ಕೊಡುವ ವಿಶ್ವಾಸ ಇದೆ ಎಂದರು.
ಟಿಪ್ಪು ಬಗ್ಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಂಗಳೂರು ದರ್ಶನ ಪುಸ್ತಕ ಬಿಡುಗಡೆ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಅವರ ಮತ್ತು ಸಚಿವರ ಮುಂದೆಯೇ ಆ ಪುಸ್ತಕ ಬಿಡುಗಡೆ ಆಗಿತ್ತು. ಆ ಪುಸ್ತಕದಲ್ಲಿ ಟಿಪ್ಪು ಕ್ರೂರಿ, ನೆತ್ತರು ಹರಿಸಿದವ ಅಂತ ಮಾಹಿತಿ ಇದೆ. ಕಾಂಗ್ರೆಸ್ನಲ್ಲಿ ಎಲ್ಲವೂ ದ್ವಂದ್ವ. ಟಿಪ್ಪು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಇನ್ನು ಬಿಜೆಪಿ ಸರ್ಕಾರ 100 ದಿನಗಳನ್ನು ಪೂರೈಸಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ 100 ದಿನ ಮುಗಿಸಿದ್ದಾಗ ಅವರ ಆಡಳಿತದಲ್ಲಿ ಎಷ್ಟು ಕೊಲೆಗಳಾಗಿವೆ ಅನ್ನೋದು ಗೊತ್ತು. ಮಂಗಳೂರಿಗೆ ಸಿದ್ದರಾಮಯ್ಯ ಬರ್ತಿದ್ದಾರೆ ಅಂತ ಶರತ್ ಮಡಿವಾಳರ ಮೃತದೇಹ ಮುಚ್ಚಿಡಲಾಗಿತ್ತು. ಸಿದ್ದರಾಮಯ್ಯ ಮಂಗಳೂರಿನಿಂದ ತೆರಳಿದ ಬಳಿಕ ಮೃತದೇಹ ಹೊರಗೆ ತರಲಾಯಿತು ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ ನಡೆಸಿದರು.