ಬೆಂಗಳೂರು: ನಿನ್ನೆ ರಾತ್ರಿ ವಾಕಿಂಗ್ಗೆ ಹೋಗಿದ್ದ ಅಲಯನ್ಸ್ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ.
ರಾತ್ರಿ ಊಟ ಮುಗಿಸಿ ಮನೆಯಿಂದ ವಾಕಿಂಗ್ ಹೋಗಿದ್ದ ಅಯ್ಯಪ್ಪ ದೊರೆ, ವಾಪಾಸ್ ಮನೆಗೆ ಬಂದಿರಲಿಲ್ಲ. ಇದ್ರಿಂದ ಗಾಬರಿಗೊಂಡ ಮನೆಯವರು ರಾತ್ರಿ ಹುಡುಕಾಡಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವ ವಿಚಾರ ಬಯಲಿಗೆ ಬಂದಿದೆ. ತಕ್ಷಣ ಸ್ಥಳಾಕ್ಕಾಗಮಿಸಿದ ನಗರ ಆಯುಕ್ತ ಭಾಸ್ಕರ್ ರಾವ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಆರ್.ಟಿ.ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾದ ಕುಲಪತಿ ಅಯ್ಯಪ್ಪ ದೊರೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಲಿಂಗಾಯುತ ಧರ್ಮಕ್ಕೆ ಆಗ್ರಹಿಸಿ, ಹೋರಾಟ ನಡೆಸಿ ಜನಸಾಮಾನ್ಯರ ಪಕ್ಷವನ್ನು ಸ್ಥಾಪಿಸಿದ್ದರು. ಮಾತ್ರವಲ್ಲದೇ ಅಲಯನ್ಸ್ ಯೂನಿವರ್ಸಿಟಿಗೆ ಸೇರಿದ ಜಮೀನು ವಿವಾದವೂ ಸಹ ಇತ್ತು. ಹೀಗಾಗಿ ಎರಡು ಕಡೆಯ ವಿಚಾರ ತೆಗೆದುಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಗರ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಅಯ್ಯಪ್ಪ ದೊರೆ ನಿನ್ನೆ ಮನೆಯಿಂದ ಊಟ ಮುಗಿಸಿ ವಾಕಿಂಗ್ಗೆ ಬಂದಿದ್ದಾರೆ. ಈ ವೇಳೆ ಯಾರೋ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಅವರ ಪತ್ನಿ ಈ ಬಗ್ಗೆ ಹೊಯ್ಸಳಗೆ ಮಾಹಿತಿ ನೀಡಿದ್ದಾರೆ. ಅಯ್ಯಪ್ಪ ದೊರೆ ವಿಜಯಪುರ ಮೂಲದವರಾಗಿದ್ದು, 17 ವರ್ಷದಿಂದ ಬೆಂಗಳೂರಿನಲ್ಲೇ ವಾಸವಿದ್ದರು. 7 ರಿಂದ 8 ವರ್ಷ ಅಲಯನ್ಸ್ ಯೂನಿವರ್ಸಿಟಿ ಉಪಕುಲಪತಿಯಾಗಿದ್ದರು. ಕೋರ್ಟ್ನಲ್ಲಿ ಅಲಯನ್ಸ್ ಯೂನಿವರ್ಸಿಟಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ನಡೆಯುತ್ತಲೇ ಇತ್ತು. ಈಗಾಗಲೇ ತನಿಖಾ ತಂಡ ರಚನೆ ಮಾಡಲಾಗಿದ್ದು, ಎಲ್ಲಾ ಆ್ಯಂಗಲ್ನಿಂದೂ ತನಿಖೆ ನಡೆಸುತ್ತಿದ್ದೇವೆ ಎಂದರು.