ಬೆಂಗಳೂರು: ಹಣಕಾಸಿನ ವೈಷಮ್ಯಕ್ಕಾಗಿ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಶನಿವಾರ ರಾತ್ರಿ ಆಚಾರ್ಯ ಕಾಲೇಜು ಬಳಿ ಮಾತುಕತೆ ಸೋಗಿನಲ್ಲಿ ರವಿಕುಮಾರ್ ಎಂಬುವರನ್ನು ಕರೆಯಿಸಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆರೋಪದಡಿ ಮಧುಸೂದನ್, ಆನಂದ್, ಸೋಮಶೇಖರ್, ಮಹೇಶ್ ಹಾಗೂ ಅಂಜನಮೂರ್ತಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ರವಿಕುಮಾರ್ ಹಾಗೂ ಆರೋಪಿ ಮಧುಸೂದನ್ ನೆರೆಹೊರೆ ನಿವಾಸಿಗಳಾಗಿದ್ದರು. ಕೆಲ ತಿಂಗಳ ಹಿಂದೆ ಮಧುಸೂದನ್ಗೆ ರವಿ ಒಂದು ಲಕ್ಷ ಸಾಲ ನೀಡಿದ್ದ. ನೀಡಿದ ಗಡುವಿನೊಳಗೆ ಸಾಲ ವಾಪಸ್ ನೀಡದೆ ಆರೋಪಿ ಸತಾಯಿಸುತ್ತಿದ್ದ. ಇಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತಿತ್ತು. ಇಬ್ಬರ ಜಗಳ ವೈಯಕ್ತಿಕತೆಗೆ ತಿರುಗಿತ್ತು. ಇದರಿಂದ ಅಸಮಾಧಾನಗೊಂಡ ಮಧುಸೂದನ್ ತನ್ನ ಸಹಚರರೊಂದಿಗೆ ಜೊತೆ ಹತ್ಯೆಗೆ ಸಂಚು ರೂಪಿಸಿದ್ದ.
ಆ.21ರಂದು ಮಾತುಕತೆಗೆ ಕರೆಯಿಸಿಕೊಂಡು ಚಾಕುವಿನಿಂದ ತಿವಿದು ಆರೋಪಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ಸೋಮಶೇಖರ್ ವಿರುದ್ದ ಎರಡು ಅಪರಾಧ ಪ್ರಕರಣ ದಾಖಲಾಗಿವೆ ಎಂದು ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ತಿಳಿಸಿದ್ದಾರೆ.