ಹೊಸಕೋಟೆ: ತಾಲೂಕಿನ ಪೊಲೀಸರು ಮಾಜಿ ಸಚಿವ ಎಂಟಿಬಿ ನಾಗರಾಜ್ ಕಪಿಮುಷ್ಟಿಯಲ್ಲಿದ್ದು, ಮೂಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಬಿ.ಎನ್ ಬಚ್ಚೇಗೌಡ ಆರೋಪಿಸಿದ್ದಾರೆ.
ಹೊಸಕೋಟೆಯಲ್ಲಿ ಉಂಟಾಗುತ್ತಿರುವ ಕಾನೂನು ಸುವ್ಯವಸ್ಥೆಯ ಸಮಸ್ಯೆಗೆ ಪೊಲೀಸರೇ ನೇರ ಹೊಣೆಗಾರರಾಗಿದ್ದು, ಮಾಜಿ ಸಚಿವರು ಉಪಚುನಾವಣೆಯಲ್ಲಿ ಪರಾಭವಗೊಂಡ ನಂತರ ಭ್ರಮನಿರಸನ ಗೊಂಡು ಸರಕಾರದ ಬೆಂಬಲವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 9ರಂದು ವಾಗಟ ಗ್ರಾಮ ಪಂಚಾಯಿತಿಯ ಸದಸ್ಯ ಮಂಜುನಾಥ್ ಹಾಗೂ ಮುರಳಿ ಎಂಬುವರು ಏತ ನೀರಾವರಿ ಯೋಜನೆಯಡಿ ಕೆರೆಗೆ ನೀರು ಹರಿದುಬರುತ್ತಿರುವುದನ್ನು ವೀಕ್ಷಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಜನಾರ್ದನ್ ವಿನಾಕಾರಣ ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕೋಡಿಹಳ್ಳಿಯ ಕೆ. ಎಸ್. ಸುರೇಶ್ ಪರಿಸ್ಥಿತಿಯನ್ನು ತಿಳಿಗೊಳಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಘಟನೆ ಬಗ್ಗೆ ಮಂಜುನಾಥ್ ತಿರುಮಲಶೆಟ್ಟಿಹಳ್ಳಿ ಪೊಲೀಸರಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಸುರೇಶ್ ವಿರುದ್ದ ಜನಾರ್ಧನ್ ವಾಹನ ಚಾಲಕ ನವೀನ್ ನೀಡಿದ ದೂರನ್ನು ದಾಖಲಿಸಿಕೊಂಡು ಬಂಧಿಸಲು ಯತ್ನಿಸಿದ್ದಾರೆ. ಗ್ರಾಮದಲ್ಲಿ 4 ಪೊಲೀಸ್ ಭದ್ರತಾ ಪಡೆಯೊಂದಿಗೆ ಸುಮಾರು 150 ಪೊಲೀಸರನ್ನು ನಿಯೋಜಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ತಾಲೂಕಿನ ಬ್ಯಾಲಹಳ್ಳಿ ಹಾಗೂ ಮಲ್ಲಸಂದ್ರ ಕೆರೆಗಳಲ್ಲಿ ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಮಲ್ಲಸಂದ್ರ ಕೆರೆಯ ನೀರು ಕೋಡಿಹಳ್ಳಿ, ಕಾಚರಕನಹಳ್ಳಿ, ಭಕ್ತರಹಳ್ಳಿಗೆ ಹರಿಯುವುದನ್ನು ತಪ್ಪಿಸಲು ಮಾಜಿ ಸಚಿವ ಎಂಟಿಬಿ ನಾಗರಾಜ್ ಅಡ್ಡಿಪಡಿಸಿದ್ದರು. ಈ ಸಂಬಂಧ ಸುರೇಶ್ ಹೈಕೋರ್ಟಿನಲ್ಲಿ ಹೂಡಿದ್ದ ದಾವೆಯನ್ವಯ ಯೋಜನೆ ಮುಂದುವರೆಸಲು ಆದೇಶಿಸಲಾಗಿತ್ತು. ಇದನ್ನೆ ಪ್ರತಿಷ್ಠೆ ಯನ್ನಾಗಿಸಿಕೊಂಡು ದ್ವೇಷ ಸಾಧಿಸುವ ದುರುದ್ದೇಶದಿಂದ ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾಗಲೂ ಪೊಲೀಸ್ ಠಾಣೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಇದೇ ಚಾಳಿಯನ್ನು ಈಗಲೂ ಮುಂದುವರೆಸುತ್ತಿದ್ದು, ಪೊಲೀಸರು ದೂರು ದಾಖಲಿಸುವ ಮೊದಲು ಮಾಜಿ ಸಚಿವರಿಂದ ಅನುಮತಿ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.
ಇಷ್ಟೇ ಅಲ್ಲದೆ ತಮ್ಮ ಬೆಂಬಲಿಗ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು ಬೆದರಿಕೆ ಒಡ್ಡಿ ತಪ್ಪೋಪ್ಪಿಗೆ ಹೇಳಿಕೆ ಪಡೆಯುವುದು ಸಹ ನಡೆಯುತ್ತಿದೆ. ಪೊಲೀಸರು ಮಾಜಿ ಸಚಿವರ ಏಜೆಂಟರಂತೆ ವರ್ತಿಸಿ ನಿಷ್ಕ್ರಿಯರಾಗಿದ್ದು ಸಾಮಾನ್ಯ ಜನರು ನ್ಯಾಯ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಘಟನೆ ಹಾಗೂ ಪೊಲೀಸರ ಪಕ್ಷಪಾತ ಧೋರಣೆಯ ಬಗ್ಗೆ ಈಗಾಗಲೇ ರಾಜ್ಯ ಗೃಹ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಪರಿಸ್ಥಿತಿ ಸುಧಾರಣೆಗೊಳ್ಳದಿದ್ದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.