ಬೆಂಗಳೂರು: ಹಿಂದೂ ಫೈರ್ ಬ್ರ್ಯಾಂಡ್ ರಾಜಕಾರಣಿಯಾಗಿರುವ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸಕ್ರಿಯ ಚಟುವಟಿಕೆಗೆ ಮರು ಪ್ರವೇಶ ಮಾಡಿದ್ದಾರೆ. ಅನಾರೋಗ್ಯದಿಂದ ವಿಶ್ರಾಂತಿ ಮೊರೆ ಹೋಗಿದ್ದ ಅವರು ಸಿಎಂ ಕಚೇರಿಯಲ್ಲಿ ಕಾಣಿಸಿಕೊಂಡು ತಮ್ಮ ರೀ ಎಂಟ್ರಿಯನ್ನು ಖಚಿತಪಡಿಸಿದರು.
ಮಾರ್ಚ್ನಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವೈದ್ಯರ ಸಲಹೆಯಂತೆ ದೀರ್ಘಾವಧಿ ವಿಶ್ರಾಂತಿ ಮೊರೆ ಹೋಗಿದ್ದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಂಪೂರ್ಣ ಗುಣಮುಖರಾಗಿದ್ದು, ಮೊದಲಿನಂತೆ ಚಟುವಟಿಕೆಯಿಂದ ಕೂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ರಾಜಕೀಯ ಜೀವನ ಮುಗಿದೇ ಹೋಯಿತು ಎನ್ನುವವರಿಗೆ ಉತ್ತರ ನೀಡಿದ್ದ ಸಂಸದರು, ಇದೀಗ ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿಗೆ ಬರುತ್ತಿದ್ದಂತೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಸಂಸದ ಅನಂತ್ ಕುಮಾರ್ ಹೆಗಡೆ ಭೇಟಿ ನೀಡಿದರು. ಯಡಿಯೂರಪ್ಪ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ ಸಂಸದರ ಯೋಗಕ್ಷೇಮ ವಿಚಾರಿಸಿದ ಸಿಎಂ, ಇಷ್ಟು ಬೇಗ ಚೇತರಿಸಿಕೊಂಡು ಸಕ್ರೀಯ ಚಟುವಟಿಕೆಯಲ್ಲಿ ತೊಡಗಿಕೊಂಡೊರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ಜನತೆಗೆ ಸದಾ ಸಿಗುತ್ತೀರಿ, ಕ್ಷೇತ್ರದಲ್ಲಿದ್ದು ಅಭಿವೃದ್ಧಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕರಾವಳಿಯಲ್ಲಿ ಬಿಜೆಪಿಯ ಟ್ರಂಪ್ ಕಾರ್ಡ್ ಆಗಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಪಕ್ಕಾ ಹಿಂದಿತ್ವವಾದಿ. ಕೇಂದ್ರ ಸಚಿವ ಸ್ಥಾನದಲ್ಲಿದ್ದರೂ ತಮ್ಮ ಅಜೆಂಡಾ ಬಿಡದೇ ಸಾಕಷ್ಟು ವಿವಾದದಲ್ಲಿಯೂ ಸಿಲುಕಿದ್ದರು. ಲೋಕಸಭೆಯಲ್ಲಿ ಕ್ಷಮೆಯನ್ನೂ ಕೇಳಿ ಪಕ್ಷಕ್ಕೆ ಮುಜುಗರವುಂಟು ಮಾಡಿದರೂ ತಮ್ಮ ಹಿಂದುತ್ವ ವಾದವನ್ನು ಬಿಡಲಿಲ್ಲ. ಸಧ್ಯದ ಮಟ್ಟಿಗೆ ಕರಾವಳಿಯಲ್ಲಿ ಅನಂತ್ ಕುಮಾರ್ ಹೆಗಡೆ ಬಿಜೆಪಿಯ ಶಕ್ತಿಯಾಗಿದ್ದು, ಸಕ್ರೀಯ ಚಟುವಟಿಕೆಗೆ ಮರಳಿದ್ದು ಕರಾವಳಿ ಭಾಗದಲ್ಲಿ ಪಕ್ಷಕ್ಕೆ ಬಲ ತಂದಂತಾಗಿದೆ.