ಬೆಂಗಳೂರು: ಬಿಎಂಟಿಸಿ ಅಂದಾಕ್ಷಣ ಹಲವರಿಗೆ ಚಿಲ್ಲರೆ ವಿಷಯಕ್ಕೂ ಕಾಲು ಕೆರೆದು ಬೈಯ್ದಾಡಿಕೊಳ್ಳುವ ನಿರ್ವಾಹಕರ ನೆನಪಾಗತ್ತೆ. ಇವರ ಜೊತೆಗೆ ಯಮಸ್ವರೂಪಿ ಚಾಲಕ. ಆದರೆ ಮಹಾನಗರ ಸಾರಿಗೆಯ ಈ ಇತಿಹಾಸಕ್ಕೆ ಅಪವಾದ ಎನ್ನುವಂತೆ ಒಂದು ಬಸ್ ಇದೆ. ಪರಿಸರವನ್ನೇ ತನ್ನ ಜೀವನಾಡಿ ಎಂದು ಹೇಳುವ ಚಾಲಕರಿದ್ದಾರೆ ಅಂದರೆ ನೀವು ನಂಬಲೇ ಬೇಕು.
ಇಂದಿರಾ ನಗರದ ಡಿಪೋ 6ರಿಂದ ದೊಮ್ಮಲೂರು ಟು ಶ್ರೀನಗರದ ನಡುವೆ ಸಂಚರಿಸುವ ಈ ಬಸ್ ಅಂದರೆ, ಪ್ರಯಾಣಿಕರ ಮೊಗದಲ್ಲಿ ನಗು ಅರಳುತ್ತೆ. ಕಾರಣ ಪ್ರಯಾಣಿಕರ ಪಾಲಿಗೆ ಈ ಬಸ್ ಪುಟ್ಟ ಸಸ್ಯತೋಟ. ಈ ಬಸ್ನಲ್ಲಿ ಪ್ರಯಾಣಕ್ಕೆ ಹೋದರೆ ನಿಮಗೆ ಮೊದಲು ಸ್ವಾಗತ ಕೋರುವುದೇ ಹಚ್ಚ ಹಸಿರ ಗಿಡಗಳು. ಅಂದಹಾಗೇ, ಹಸಿರ ಬಸ್ಸಿನ ಶಕ್ತಿಯಾಗಿರೋದು ಬಿಎಂಟಿಸಿ ಚಾಲಕ ನಾರಾಯಣಪ್ಪ.
ನಾರಾಯಣಪ್ಪ, ಮೂಲತಃ ಕೋಲಾರದವರು. ಬಿಎಂಟಿಸಿಯಲ್ಲಿ 28 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪರಿಸರ ಕಾಳಜಿ ಇಂದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಯಾಕೆಂದರೆ ಬೆಂಗಳೂರೆಂಬ ಮಹಾನಗರದಲ್ಲಿ ಕಟ್ಟಡಗಳ ಮೇಲೆ ಕಟ್ಟಡಗಳು ಬೆಳೆಯುತ್ತಲೇ ಇದೆ. ಕಂಗೊಳಿಸುವ ಹಸಿರು ಕಾಣುವುದೇ ತೀರಾ ಅಪರೂಪ. ಮನೆಯ ಸುತ್ತಮುತ್ತ ಗಿಡ ನೆಡಲು ಸ್ಥಳಾವಕಾಶ ಇಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲಿ, ಒಂದು ಕಡೆ ಸರ್ಕಾರದ ಕೆಲಸ ಜೊತೆಗೆ ಪರಿಸರದ ಕೆಲಸ ಎರಡನ್ನೂ ಒಂದೇ ಕಡೆ ಮಾಡುತ್ತಾ ಎಲ್ಲರ ಹುಮ್ಮಸ್ಸಿಗೆ ಕಾರಣರಾಗಿದ್ದಾರೆ ಚಾಲಕ ನಾರಾಯಣ್ಣಪ್ಪ.
ತಾವು ಕೂರುವ ಜಾಗದ ಸುತ್ತಲೂ ನಾನಾ ಬಗೆಯ ಸಸಿಗಳನ್ನ ಇಟ್ಟಿದ್ದಾರೆ. ನಿತ್ಯ ಅದಕ್ಕೆ ನೀರು ಹಾಕಿ ಪೋಷಿಸುತ್ತಿದ್ದಾರೆ. ಜೊತೆಗೆ ಬಸ್ಸಿನಲ್ಲೇ ಪ್ರಯಾಣಿಕರಿಗಾಗಿ ಕುಡಿವ ನೀರಿನ ವ್ಯವಸ್ಥೆ ಕೂಡಾ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಬಸ್ಸಿನೊಳಗೆ ಸಸ್ಯ ತೋಟ ಮಾಡಿದ್ದು, ಸುಖಕರ ಪ್ರಯಾಣಕ್ಕೆ ಇನ್ನೇನು ಬೇಕು ಅಲ್ವಾ.
ಇವರ ಈ ಪರಿಸರ ಕಾಳಜಿಗೆ ಸಿಬ್ಬಂದಿ, ಪ್ರಯಾಣಿಕರು, ಸ್ನೇಹಿತರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಮಿನಿ ಪಾರ್ಕ್ಗೆ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನ ಪ್ರಭ ಕೂಡ ಟಿಟ್ವರ್ ಮೂಲಕ ಅಭಿನಂದನೆ ತಿಳಿಸಿ ಹೊಗಳಿದ್ದಾರೆ.