ಬೆಂಗಳೂರು: ಬೇಗೂರಿನ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಿ ನಗರದ ಮನೆಯೊಂದರಲ್ಲಿ ತಾಯಿ - ಮಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯಮುನಾ ಅಲಿಯಾಸ್ ಚಂದ್ರಕಲಾ (40) ರಾತನ್ಯ (3) ಕೊಲೆಯಾದ ತಾಯಿ - ಮಗಳು. ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.
ಚೌಡೇಶ್ವರಿ ಲೇಔಟ್ ನಲ್ಲಿನ ಮನೆಯೊಂದರಲ್ಲಿ ದುರ್ಘಟನೆ ನಡೆದಿದೆ. ಇಂದು ಮಧ್ಯಾಹ್ನ ಕೊಲೆಯಾಗಿದ್ದು, ಸಂಬಂಧಿಕರು ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ರಕ್ತದ ಮಡುವಿನಲ್ಲಿ ತಾಯಿ - ಮಗುವಿನ ಶವಗಳು ಪತ್ತೆಯಾಗಿವೆ. ಮನೆಯ ಹಾಲ್ನಲ್ಲಿ ತಾಯಿಯ ಮೃತದೇಹ ಬಿದ್ದಿದ್ದರೆ ಮಗಳ ದೇಹ ರೂಮ್ನಲ್ಲಿ ಪತ್ತೆಯಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಹೊಟ್ಟೆಪಾಡಿಗಾಗಿ ನಗರಕ್ಕೆ ಬಂದು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಚಂದ್ರಕಲಾ ಕುಟುಂಬ ವಾಸವಾಗಿತ್ತು. ಮೃತರ ಗಂಡ ಚೆನ್ನವೀರ ಸ್ವಾಮಿ ಗಾರ್ಮೆಂಟ್ಸ್ ನೌಕರನಾಗಿದ್ದಾರೆ. ಇವರು ಮೂಲತಃ ಚಿತ್ರದುರ್ಗದ ಬಂಗಾರಕ್ಕನ ಹಳ್ಳಿ ನಿವಾಸಿಗಳಾಗಿದ್ದಾರೆ. ಘಟನೆ ಸಂಬಂಧ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿ:
ಆಯುರ್ವೇದಿಕ್ ವಸ್ತುಗಳ ಆನ್‌ಲೈನ್ ಮಾರ್ಕೆಟಿಂಗ್ ಮಾಡುತ್ತಿದ್ದ ಚಂದ್ರಕಲಾ ಮನೆಯಲ್ಲಿ ಇರುತ್ತಿದ್ದರು. ಬೆಳಗ್ಗೆ 9:30ಕ್ಕೆ ಚಂದ್ರಕಲಾ ಪತಿ ಚೆನ್ನವೀರಸ್ವಾಮಿ ಮನೆಯಿಂದ ಗಾರ್ಮೆಂಟ್ಸ್ ಗೆ ತೆರಳಿದ್ದಾನೆ. ಬಳಿಕ 10:30ರ ಸುಮಾರಿಗೆ ಮನೆಗೆ ಅಪರಿಚಿತ ಎಂಟ್ರಿಕೊಟ್ಟಿದ್ದಾನೆ. ಮದ್ಯಾಹ್ನ 2 ಗಂಟೆಗೆ ಅಪರಿಚಿತ ಮನೆಯಿಂದ ತೆರಳಿದ್ದಾನೆ. ಮನೆಗೆ ಬಂದ ಅಪರಿಚಿತ ವ್ಯಕ್ತಿಯಿದಲೇ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಏರಿಯಾದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಬೇಗೂರು ಪೊಲೀಸರಿಂದ ತನಿಖೆ ಆರಂಭವಾಗಿದೆ.
ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಹಾಸ್ಟೆಲ್ನಲ್ಲಿ ಇದ್ದ. 3 ವರ್ಷದ ಹೆಣ್ಣು ಮಗುವಿನೊಂದಿಗೆ ವಾಸವಿದ್ದರು. ಮಗು ಹಾಗೂ ತಾಯಿಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲ ಸುಮಾರು 15 - 20 ಬಾರಿ ಚಾಕುವಿನಿಂದ ಇರಿಯಲಾಗಿದೆ. ಚಂದ್ರಕಲಾಗೆ ಪರಿಚಯವಿರುವ ವ್ಯಕ್ತಿಯಿಂದಲೇ ಕೃತ್ಯ ನಡೆದಿರೋ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: BREAKING NEWS ಬೆಳಗಾವಿ: ಮಳೆಗೆ ಮನೆ ಕುಸಿದು ಒಂದೇ ಕುಟುಂಬದ 7 ಜನರ ದುರ್ಮರಣ