ಬೆಂಗಳೂರು : ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಸಚೇತಕ ಸೇರಿದಂತೆ ಹಲವು ಹಿರಿಯ ಸದಸ್ಯರಿಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವೇ ಕೊನೆಯದ್ದಾಗಿದೆ. ಈ ಅವಧಿ ಮುಗಿಸುತ್ತಿರುವ ಸದಸ್ಯರು ಕಲಾಪದಲ್ಲಿ ಮಾತನಾಡಲು ಹೆಚ್ಚಿನ ಅವಕಾಶ ನೀಡಲು ಪಕ್ಷಗಳು ನಿರ್ಧರಿಸಿದೆ.
ಪ್ರತಿಪಕ್ಷ ನಾಯಕರಾಗಿರುವ ಎಸ್.ಆರ್. ಪಾಟೀಲ್ ಅವರಿಗೆ ಈ ಅಧಿವೇಶನ ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸಲು ಸದವಕಾಶವಾಗಿದೆ. ಕಬ್ಬು ಬೆಳೆಗಾರರ ಸಮಸ್ಯೆ, ಮಹದಾಯಿ ಯೋಜನೆ ಜಾರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಚರ್ಚೆ, ಗಡಿ ಸಮಸ್ಯೆಗಳೂ ಸೇರಿದಂತೆ ಹಲವು ವಿಚಾರಗಳನ್ನು ಮೊದಲಿನಿಂದಲೂ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ತಾವು ಪ್ರತಿನಿಧಿಸುವ ಜಿಲ್ಲೆಯ ಪಕ್ಕದ ಬೆಳಗಾವಿಯಲ್ಲೇ ಅಧಿವೇಶನ ನಡೆಯುತ್ತಿರುವುದರಿಂದ ಮಾತನಾಡಲು ಉತ್ತಮ ಅವಕಾಶ ಸಿಕ್ಕಂತಾಗಿದೆ.
ಸ್ಥಳೀಯರೂ ಆಗಿರುವ ಹಿನ್ನೆಲೆಯಲ್ಲಿ ಇವರ ಅನುಭವವನ್ನು ಸದ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. ಹೆಚ್ಚು ಕಾಲಾವಧಿ ಚರ್ಚೆಗೆ ಅವಕಾಶ ನೀಡುವ ಮೂಲಕ ಕಳೆದ ನಾಲ್ಕು ದಶಕಗಳಿಂದ ವಿಧಾನ ಪರಿಷತ್‌ನಲ್ಲಿ ತಮ್ಮ ಅನುಭವದ ನುಡಿಗಳನ್ನು ಹೇಳುತ್ತಾ ಬಂದಿರುವ ಪಾಟೀಲರಿಗೆ ಇದೇ ಕಡೆಯ ಅಧಿವೇಶನವಾಗಲಿದೆ.
ಜ.5ಕ್ಕೆ ಅವರ ಸದಸ್ಯತ್ವ ಅವಧಿ ಪೂರ್ಣಗೊಳ್ಳಲಿದೆ. ಇನ್ನೊಂದು ಅವಧಿಗೆ ಅವರಿಗೆ ಸ್ಪರ್ಧಿಸಲು ಅವಕಾಶ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನ ಅವರ ಪಾಲಿಗೆ ಉತ್ತಮ ವೇದಿಕೆಯಾಗಿ ಲಭಿಸಿದೆ.
ಪರಿಷತ್ ಅವಧಿ ಮುಗಿಸುತ್ತಿರುವ ಸದಸ್ಯರು : ಬೆಳಗಾವಿಯಲ್ಲಿ ಡಿ.13ರಿಂದ 24ರವರೆಗೆ ನಡೆಯುವ ಅಧಿವೇಶನದಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಅವರು ಸುದೀರ್ಘವಾಗಿ ಚರ್ಚಿಸಲಿದ್ದಾರೆ. ಇನ್ನು ಹಿರಿಯ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿ (ಮಾಜಿ ಸಭಾಪತಿ), ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್, ಆರ್. ಧರ್ಮಸೇನ, ಬಸವರಾಜ್ ಪಾಟೀಲ್ ಇಟಗಿ, ಎಂ.ಎ. ಗೋಪಾಲಸ್ವಾಮಿ, ರಘು ಆಚಾರ್ ಅವರು ಕಣದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಇದೇ ಕಡೆಯ ಅಧಿವೇಶನ ಆಗಲಿದೆ.
ಈ ಸದಸ್ಯರಿಗೆ ಪರಿಷತ್‌ನಲ್ಲಿ ಹೆಚ್ಚಿನ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ. ಇನ್ನು ಎಸ್.ರವಿ, ಕೆ.ಸಿ. ಕೊಂಡಯ್ಯ, ಆರ್. ಪ್ರಸನ್ನ ಕುಮಾರ್ ಕಣದಲ್ಲಿದ್ದಾರೆ. ಗೆದ್ದರೆ ಇವರಿಗೆ ಮರುಪ್ರವೇಶ ಸಿಗಲಿದೆ.
ಇವರೆಲ್ಲರಿಗೂ ಅವಕಾಶಗಳು ಮುಂದೆ ಹೇಗೆ ಸಿಗಲಿದೆ ಎನ್ನುವ ಕುತೂಹಲ ಮೂಡಿರುವ ನಡುವೆಯೇ ತಮ್ಮ ಸದಸ್ಯ ಬಲವನ್ನು 39ಕ್ಕೆ ಏರಿಕೆ ಮಾಡಿಕೊಂಡು ವಿಧಾನ ಪರಿಷತ್‌ನಲ್ಲಿ ಅತಿದೊಡ್ಡ ಪಕ್ಷವಾಗುವ ಕನಸು ಕಾಣುತ್ತಿರುವ ಬಿಜೆಪಿ ಸಹ ಕಾಂಗ್ರೆಸ್‌ಗೆ ದೊಡ್ಡ ಎದಿರೇಟು ನೀಡಲು ತಂತ್ರಗಳನ್ನು ರೂಪಿಸುತ್ತಿದೆ.
ಚಳಿಗಾಲದ ಅಧಿವೇಶನ ಮುಗಿಸಿ ಮುಂದಿನ ಬಜೆಟ್ ಪೂರ್ವಭಾವಿ ಅಧಿವೇಶನ ಬೆಂಗಳೂರಿನಲ್ಲಿ ನಡೆಯಲಿದೆ. ಅಲ್ಲಿ ಯಾವ್ಯಾವ ಪಕ್ಷದಿಂದ ಹೊಸಮುಖಗಳು ಎದುರಾಗಲಿವೆ ಎನ್ನುವ ಕುತೂಹಲ ಸಹ ಮನೆ ಮಾಡಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ Omicrone ಭೀತಿ: ಶಾಸಕ, ಸಚಿವರಲ್ಲೂ ಆತಂಕ, ಸುರಕ್ಷತಾ ಮಾರ್ಗಸೂಚಿ ಏನು?