ಬೆಂಗಳೂರು: ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ ಸೇರಿದಂತೆ 27ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರ ಹಲಸೂರು ಸಂಚಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸಬ್ ಇನ್ಸ್ಪೆಕ್ಟರ್ ಬಿ.ಜಿ.ಮ್ಯಾಥ್ಯು ನೇತೃತ್ವದ ತಂಡ ಸಂಚಾರಿ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರರನ್ನು ತಡೆದು ಪರಿಶೀಲಿಸಿದಾಗ 27ಕ್ಕೂ ಹೆಚ್ಚು ನಿಯಮ ಉಲ್ಲಂಘಿಸಿರುವುದು ಗೊತ್ತಾಗಿದೆ. ಪರಿಣಾಮ, ಆತನಿಂದ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಉಲ್ಲಂಘನೆ ಸೇರಿದಂತೆ 27 ಪ್ರಕರಣಗಳಿಂದ 23 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಇನ್ನು ಬೈಕ್ ಜಪ್ತಿ ಮಾಡಿ ಸವಾರನನ್ನು ಸಂಚಾರ ಅರಿವು ತರಬೇತಿಗೆ ಕಳುಹಿಸಲಾಗಿದೆ.
ಏನಿದು ನಿಯಮ?
10ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದರೆ ಅಂತಹ ವಾಹನ ಚಾಲಕರನ್ನು ಸಂಚಾರಿ ನಿಯಮಗಳ ಅರಿವು ತರಬೇತಿಗೆ ಕಳುಹಿಸಲಾಗುತ್ತದೆ. ತರಬೇತಿ ಪಡೆದು ಪ್ರಮಾಣಪತ್ರ ತೆಗೆದುಕೊಂಡ ಬಳಿಕವಷ್ಟೇ ವಾಹನ ಹಿಂತಿರುಗಿಸಲಾಗುತ್ತದೆ.