ಬೆಂಗಳೂರು: ಸ್ವಾಮಿ ವಿವೇಕಾನಂದರ ಪ್ರೇರಣೆಯೊಂದಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 10 ದಶ ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದರು.
ವಿಧಾನಸೌಧದದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಎಲ್ಲಾ ಹಂತಗಳಲ್ಲೂ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅಡಕಗೊಳಿಸುವುದರ ಜೊತೆಗೆ ಉನ್ನತ ಶಿಕ್ಷಣದಲ್ಲಿ ಅವರು ನೀಡಿರುವ ಪ್ರೇರಣೆಯೊಂದಿಗೆ ಸರ್ಕಾರ ಮಾಡಿರುವ ಕಾರ್ಯಕ್ರಮಗಳ ಪ್ರಾತ್ಯಕ್ಷಿಕೆಯನ್ನು ನಾನು ನೀಡಿದ್ದೇನೆ. ಇದಾದ ಮೇಲೆ ರಾಜ್ಯದಲ್ಲಿ ಹತ್ತು ದಶಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವ ಬಗ್ಗೆ ನಡೆದ ಉನ್ನತಮಟ್ಟದ ಚರ್ಚಾಗೋಷ್ಠಿಯಲ್ಲಿ ಅನೇಕ ಮೌಲಿಕ ಅಭಿಪ್ರಾಯಗಳು ವ್ಯಕ್ತವಾದವು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರು ನೀಡಿರುವ ಸಲಹೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.
ಕೌಶಲ್ಯಾಭಿವೃದ್ಧಿ, ಕೃಷಿ, ತೋಟಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಉದ್ಯೋಗ ಸೃಷ್ಟಿಯಾಗುವ ಅನೇಕ ಕ್ಷೇತ್ರಗಳನ್ನು ಪ್ರತಿನಿಧಿಸುವ ತಜ್ಞರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲ ವಿವಿಧ ಕ್ಷೇತ್ರಗಳನ್ನು ಗುರುತಿಸಿದ್ದಾರೆ ಕೂಡ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಲಭ್ಯವಿರುವ ಕ್ಷೇತ್ರಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಅವುಗಳ ಬಗ್ಗೆ ಇನ್ನೊಂದು ಹಂತದಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು. ಸ್ವಾಮಿ ವಿವೇಕಾನಂದರ ಪ್ರೇರಣೆಯೊಂದಿಗೆ ಈ ಕಾರ್ಯಕ್ರವನ್ನು ಮುಖ್ಯಮಂತ್ರಿಯವರ ಜತೆ ಚರ್ಚಿಸಿ, ಕ್ಷಿಪ್ರಗತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಈ ದಿಸೆಯಲ್ಲಿ ಸರ್ಕಾರ ಈಗಾಗಲೇ ಅನೇಕ ಕಾರ್ಯಕ್ರಗಳನ್ನು ಹಾಕಿಕೊಂಡಿದೆ. ಕೃಷಿ, ಕೃಷಿ ಮಾರುಕಟ್ಟೆ, ಉನ್ನತ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿಗೆ ತಂದಿದೆ. ನನ್ನ ಇಲಾಖೆಗಳ ಮಟ್ಟಿಗೆ ಹೇಳುವುದಾದರೆ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ತರಬೇತಿ ನೀಡಿ, ಕೌಶಲ್ಯಭರಿತ ಮಾನವ ಸಂಪನ್ಮೂಲವನ್ನು ತಯಾರು ಮಾಡುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದರು.
ಇನ್ನು ಉನ್ನತ ಶಿಕ್ಷಣ ವಿಭಾಗಗಳಾದ ಸ್ನಾತಕೋತ್ತರ, ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ವೈದ್ಯಕೀಯ, ಜಿಟಿಟಿಸಿ, ಐಟಿಐಗಳಿಂದ 2024-25ರ ಹೊತ್ತಿಗೆ 24 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರಲಿದ್ದಾರೆ. ಬಿಯಾಂಡ್ ಬೆಂಗಳೂರು, ನೂತನ ಐಟಿ ನೀತಿ, ಕರ್ನಾಟಕ ಆವಿಷ್ಕಾರ ಪ್ರಾಧಿಕಾರ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಎಎಸ್‌ಡಿಎಂ ನೀತಿ, ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯಿಂದಾಗಿ ಮುಂದಿನ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ದೊಡ್ಡ ಪ್ರಮಾಣದಲ್ಲಿ ಆಗಲಿದೆ ಎಂದು ಮಾಹಿತಿ ನೀಡಿದರು.
ಓದಿ: ಬಿಜೆಪಿ ಸೇರಲು ತೀರ್ಮಾನಿಸಿಲ್ಲ, ಬೆಂಬಲ ಮಾತ್ರ ಬಿಎಸ್ವೈಗೆ : ಶಾಸಕ ಎನ್. ಮಹೇಶ್
ವಿವೇಕಾನಂದರ ಪ್ರೇರಣೆಯೊಂದಿಗೆ ಕೆಲಸ: ಇದಕ್ಕೂ ಮೊದಲು ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಂ ಯಡಿಯೂರಪ್ಪ, ಸ್ವಾಮಿ ವಿವೇಕಾನಂದರ ಚಿಂತನೆ ಮತ್ತು ಸಂದೇಶಗಳ ಪ್ರೇರಣೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಶಿಕ್ಷಣವೂ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಅವರ ಸ್ಫೂರ್ತಿಯೊಂದಿಗೆ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹನ್ನೆರಡು ಮಂದಿ ಯುವ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿದರು. ಮುಖ್ಯಮಂತ್ರಿಗಳ ಭಾಷಣದ ನಂತರ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ತಮ್ಮ ವ್ಯಾಪ್ತಿಯಲ್ಲಿರುವ ಬರುವ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಲಶೀಲತೆ ಇಲಾಖೆಗಳಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಪ್ರಾತ್ಯಕ್ಷಿಕೆ ನೀಡಿದರು.