ಬೆಂಗಳೂರು: ರಾಜ್ಯದ ಸರ್ಕಾರಿ ಸಾರಿಗೆಗಳಾದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ತಿಂಗಳ ಪಾಸ್ನಿಂದ ಅದೆಷ್ಟೋ ಸಾಮಾನ್ಯ ಜನರು ಅನುಕೂಲ ಪಡೆದಿದ್ದಾರೆ. ಈ ರೀತಿಯಲ್ಲೇ ಮೆಟ್ರೋದಲ್ಲೂ ತಿಂಗಳ ಪಾಸ್ ತರಬೇಕು ಎನ್ನುವ ಬೇಡಿಕೆ ಜನರಲ್ಲಿತ್ತು. ಇದೀಗ ನಮ್ಮ ಮೆಟ್ರೋ ಸಂಸ್ಥೆ ಬದಲಾವಣೆ ತರಲು ಮಹತ್ತರ ಹೆಜ್ಜೆ ಇಟ್ಟಿದೆ.
ಬಿಎಂಟಿಸಿಯಲ್ಲಿ ಈಗಾಗಲೇ ತಿಂಗಳ ಪಾಸ್ ವ್ಯವಸ್ಥೆ ಜಾರಿಯಲ್ಲಿದೆ. ಸಾರಿಗೆ ಸಂಸ್ಥೆಯ ತಿಂಗಳ ಪಾಸ್ ಮಾದರಿಯಲ್ಲಿ ಮೆಟ್ರೋದಲ್ಲೂ ತಿಂಗಳ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿ ಮಾಡಲು ಬಿಎಂಆರ್ಸಿಎಲ್ ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ನಮ್ಮ ಮೆಟ್ರೋ ಜಾರಿಗೆ ತರಲು ಹೊರಟಿರುವ ತಿಂಗಳ ಸ್ಮಾರ್ಟ್ ಕಾರ್ಡ್ ಯೋಜನೆ ಕೊಂಚ ವಿಭಿನ್ನವಾಗಿದೆ. ಈ ಕಾರ್ಡ್ ತಿಂಗಳ ದಿನಾಂಕದ ಆಧಾರದ ಮೇಲೆ ಚಾಲ್ತಿಯಲ್ಲಿರುವುದಿಲ್ಲ. ಬದಲಾಗಿ ಟ್ರಾವೆಲ್ ಟ್ರಿಪ್ ಸಂಖ್ಯೆ ಹಾಗೂ ಕಿಲೋಮೀಟರ್ ಆಧಾರದ ಮೇಲೆ ಸ್ಮಾರ್ಟ್ ಕಾರ್ಡ್ ಉಪಯೋಗಿಸಬಹುದು ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
25, 50, 100 ಟ್ರಿಪ್ಗಳು ಅಥವಾ 500ರಿಂದ 1000 ಕಿಲೋ ಮೀಟರ್ ಪ್ರಯಾಣದ ಆಧಾರದ ಮೇಲೆ ಕಾರ್ಡ್ ವಿತರಿಸಲಾಗುತ್ತದೆ. ಬಲ್ಕ್ ಟಿಕೆಟ್ಗಳಂತೆ ಸ್ಮಾರ್ಟ್ ಕಾರ್ಡ್ ಖರೀದಿ ಮಾಡಿದರೆ ಪ್ರಯಾಣಿಕರಿಗೆ ರಿಯಾಯಿತಿಯೂ ಸಿಗಲಿದೆ. ಈ ಸಂಬಂಧ ಈಗಾಗಲೇ ಮೆಟ್ರೋ ನಿಗಮ ಮಾಹಿತಿ ಸಂಗ್ರಹಣೆ ಮಾಡುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ - ಕೆಲ ವ್ಯಾಪಾರಿಗಳ ಸ್ಥಳಾಂತರಕ್ಕೆ ನಿರ್ಧಾರ!