ಬೆಂಗಳೂರು : ಮನಿ ಡಬ್ಲಿಂಗ್ ಮಾಡುವುದಾಗಿ ಟೈಲರ್‌ನಿಂದ 8 ಲಕ್ಷ ರೂ. ಹಣ ಪಡೆದು ವಂಚಿಸಿರುವ ಮಹಿಳೆ ಸೇರಿದಂತೆ ಐವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ನಟರಾಜನ್, ಸದಾಶಿವ ನಾಯಕ, ಶಿವರಾಜ್, ದಿಲ್ಲುಬೋನ್, ನಿರ್ಮಲಾ ಬಂಧಿತರು. ರಂಗಸ್ವಾಮಯ್ಯ ವಂಚನೆಗೊಳಗಾದ ಟೈಲರ್. ಆರೋಪಿಗಳಿಂದ 8 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ
ಪ್ರಕರಣ : ಟೈಲರ್ ಅಂಗಡಿ ಹೊಂದಿದ್ದ ದೂರುದಾರ ರಂಗಸ್ವಾಮಯ್ಯ ಬಳಿ ಆರೋಪಿ ನಿರ್ಮಲಾ ಆಗಾಗ ಬರುತ್ತಿದ್ದಳು. ತನ್ನ ಪರಿಚಿತರು ಮನಿ ಡಬ್ಲಿಂಗ್ ಮಾಡುತ್ತಿದ್ದು, 20 ಲಕ್ಷ ರೂ. ಕೊಟ್ಟರೆ 60 ಲಕ್ಷ ರೂ. ನೀಡುವುದಾಗಿ ನಂಬಿಸಿದ್ದಳು.
ಆಕೆಯ ಮಾತಿಗೆ ಮರುಳಾದ ರಂಗಸ್ವಾಮಯ್ಯ 8 ಲಕ್ಷ ರೂ. ಕೊಡುವುದಾಗಿ ಹೇಳಿದ್ದ. ನಿರ್ಮಲಾ ಮತ್ತು ಗ್ಯಾಂಗ್ ನಗರದ ಹೆಚ್‌ಬಿಆರ್ ಲೇಔಟ್‌ಗೆ ಹಣ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು.
ಇದನ್ನೂ ಓದಿ: ಡೀಸೆಲ್ ಕಳ್ಳನ ಕಾಲಿಗೆ ಗುಂಡೇಟು
ಹೇಳಿದ ಸ್ಥಳಕ್ಕೆ ರಂಗಸ್ವಾಮಯ್ಯ ಬಂದಾಗ ಆರೋಪಿಗಳು ನಟರಾಜನ್ ಎನ್ನುವ ಆರೋಪಿಯ ಕಾರಿಗೆ ಹತ್ತಿಸಿಕೊಂಡಿದ್ದರು. ಕಾರು 1 ಕಿ.ಮೀ ದೂರ ಹೋಗುತ್ತಿದ್ದಂತೆ ಆರೋಪಿಗಳ ಪೈಕಿ ಮೂವರು ಪೊಲೀಸರ ವೇಷ ಧರಿಸಿ ಅಡ್ಡಗಟ್ಟಿದ್ದರು. ರಂಗಸ್ವಾಮಯ್ಯರನ್ನು ಕಾರಿನಿಂದ ಕೆಳಗೆ ಇಳಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದರು. ಇದೀಗ ಐವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದರು.
ತನಿಖೆಯಲ್ಲಿ ಅಸಲಿ ಸಂಗತಿ ಬಯಲು : ಮನಿ ಡಬ್ಲಿಂಗ್ ಮಾಡುವ ಉದ್ದೇಶದಿಂದ ಆರೋಪಿಗಳಿಗೆ ಹಣ ನೀಡಲು ಮುಂದಾದ ವಿಚಾರ ಪೊಲೀಸರಿಗೆ ತಿಳಿಸಿದರೆ ತನಗೂ ಕಾನೂನು ಸಂಕಷ್ಟ ಎದುರಾಗಬಹುದು ಎಂದುಕೊಂಡ ರಂಗಸ್ವಾಮಯ್ಯ, ಪ್ರಕರಣದ ಕುರಿತು ತಿರುಚಿ ದೂರು ಕೊಟ್ಟಿದ್ದರು. ಆರೋಪಿಗಳು ಸೆಕೆಂಡ್ ಹ್ಯಾಂಡ್ ಕಂಟೇನರ್ ಕೊಡಿಸುವ ಆಮಿಷವೊಡ್ಡಿ 8 ಲಕ್ಷ ರೂ. ತರುವಂತೆ ಸೂಚಿಸಿದ್ದರು.
ನಂತರ ಪೊಲೀಸರ ಸೋಗಿನಲ್ಲಿ ಹಣ ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ರಂಗಸ್ವಾಮಯ್ಯ ಕೊಟ್ಟ ಹೇಳಿಕೆಗೂ, ತನಿಖೆಯಲ್ಲಿ ಕಂಡುಬಂದ ವಿಚಾರಕ್ಕೂ ತಾಳೆಯಾಗುತ್ತಿರಲಿಲ್ಲ. ಅನುಮಾನದ ಮೇರೆಗೆ ರಂಗಸ್ವಾಮಯ್ಯನನ್ನು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ ಎಂದು ಭೀಮಾಶಂಕರ್ ಗುಳೇದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.