ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್-19 ಎರಡನೇ ಅಲೆ ಸಂಬಂಧ ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಸಿಎಂ ಗಳ ಜೊತೆಗೆ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಸಹ ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ವಿಧಾನಸೌಧದಲ್ಲಿ ವಿಡಿಯೋ ಸಂವಾದ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಸಂಬಂಧ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ ಲಸಿಕೆ ಕಾರ್ಯಕ್ರಮದ ಪ್ರಗತಿ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ. ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ತ್ವರಿತಗೊಳಿಸಲು ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಧಾನಿ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಸಿಎಂ ಈಗಾಗಲೇ ತಿಳಿಸಿದ್ದು, ಹೀಗಾಗಿ ಇಂದಿನ ವಿಡಿಯೋ ಸಂವಾದದ ಆಧಾರದ ಮೇಲೆ ರಾಜ್ಯದಲ್ಲಿ ಕೆಲ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆ ಹೆಚ್ಚಿದೆ. ಪ್ರಮುಖವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧಾರಣೆ, ಸಮಾವೇಶ, ಸಮಾರಂಭಗಳಿಗೆ ನಿರ್ಬಂಧ, ಜನ ಸೇರುವ ಸ್ಥಳಗಳಲ್ಲಿ ನಿರ್ಬಂಧಗಳನ್ನು ಹೇರುವುದು ಸೇರಿದಂತೆ ಇತರೆ ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಲಿದೆ.