ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ನನಗೆ ಮುಖ್ಯ ಸಚೇತಕ ಹುದ್ದೆ ನೀಡೋದಾಗಿ ಹೇಳಿದ್ದರು. ಆದ್ರೆ ಸಮ್ಮಿಶ್ರ ಸರ್ಕಾರ ರಚನೆಯಾದ ಕಾರಣ ಆ ಅವಕಾಶ ತಪ್ಪಿತು ಎಂದು ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕರ ಭವನದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದು ಸಿಎಂಗೆ ಬಿಟ್ಟ ವಿಚಾರ. ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿದ್ದರಾಮಯ್ಯ ಅವರ ಬಳಿ ಒಮ್ಮೆ ವಿಚಾರಿಸಿದಾಗ, ಮುಂದಿನ ಅವಧಿಯಲ್ಲಿ ಮುಖ್ಯ ಸಚೇತಕ ಹುದ್ದೆ ನೀಡುವ ಭರವಸೆ ಸಿಕ್ಕಿತ್ತು. ಆದರೆ ಕಾಂಗ್ರೆಸ್ಗೆ ಸಂಪೂರ್ಣ ಬಹುಮತ ಸಿಗದ ಕಾರಣ ಈ ಅವಕಾಶ ಕೈತಪ್ಪಿದೆ ಎಂದರು.
ನಾನು ವಿಧಾನ ಪರಿಷತ್ ಸದಸ್ಯನಾಗಿ ನನ್ನ ಕಾರ್ಯವನ್ನು ನಡೆಸಿಕೊಂಡು ಸಾಗಿದ್ದೇನೆ. ನಮ್ಮಲ್ಲಿ ಅನೇಕ ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಹಿರಿಯ ರಾಜಕಾರಣಿಗಳ ನಡುವೆ ನಾನು ಪೈಪೋಟಿಗಿಳಿಯಲು ಇಚ್ಚಿಸುವುದಿಲ್ಲ. ಶಾಸಕನಾಗಿ ಜನ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದಾರೆ, ಅವರ ಸೇವೆ ಮುಂದುವರಿಸುತ್ತೇನೆ ಎಂದರು.
ನಿಗಮ-ಮಂಡಳಿ ಇಲ್ಲವೇ ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೂ ನಾನು ಆಕಾಂಕ್ಷಿ ಅಲ್ಲ. ಈ ಸ್ಥಾನಗಳನ್ನು ಕೊಟ್ಟರೂ ತೆಗೆದುಕೊಳ್ಳುವುದಿಲ್ಲ. ಅದಕ್ಕಿಂತ ಶಾಸಕನ ಸ್ಥಾನವೇ ದೊಡ್ಡದು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಚಂದ್ರಪ್ಪ ಅವರಂತ ಸಜ್ಜನ ರಾಜಕಾರಣಿ ಸೋಲಬಾರದಿತ್ತು. ಅವರ ಸೋಲು ನಿಜಕ್ಕೂ ಬೇಸರ ತರಿಸಿದೆ. ಹಾಲಿ ಸಂಸದರು ನಾರಾಯಣಸ್ವಾಮಿ ಕೂಡ ಉತ್ತಮ ವ್ಯಕ್ತಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಐಎಂಎ ಕೇಸ್ ಸಿಬಿಐಗೆ:
ಐಎಂಎ ಜ್ಯುವೆಲ್ಲರ್ಸ್ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ನೀಡುವುದು ಸೂಕ್ತ. ಸಾವಿರಾರು ಜನ ಹಣ ಕಳೆದುಕೊಂಡಿದ್ದಾರೆ. ಆರೋಪಿ ರಾಜ್ಯದಲ್ಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. ನನ್ನ ಕ್ಷೇತ್ರದ ಸುಮಾರು 1,500ಕ್ಕೂ ಹೆಚ್ಚು ಮಂದಿ ಇಲ್ಲಿ ಹಣ ಹೂಡಿಕೆ ಮಾಡಿ, ನಷ್ಟಕ್ಕೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ, ಗೃಹ ಸಚಿವರು ಸೇರಿದಂತೆ ಸಂಬಂಧಪಟ್ಟವರನ್ನು ಭೇಟಿ ಮಾಡಿ, ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.