ಬೆಂಗಳೂರು: ಸ್ಪರ್ಧೆಗೆ ನಿರಾಸಕ್ತಿ, ಕೆಳಮನೆಯತ್ತ ಆಸಕ್ತಿ, ಸೋಲಿನ ಭೀತಿ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷದ ಆರು ಹಾಲಿ ವಿಧಾನ ಪರಿಷತ್ ಸದಸ್ಯರು (Members of legislative council) ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದು, ಇವರ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ಅಂತಿಮ ಗೊಳಿಸಿ ಇಂದೇ ಪಟ್ಟಿ ಪ್ರಕಟಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ವಿಧಾನ ಪರಿಷತ್‌ನ (Legislative Council) 25 ಸ್ಥಾನಗಳು 2022ರ ಜನವರಿ 5ಕ್ಕೆ ಕೊನೆಗೊಳ್ಳಲಿದ್ದು, ಇದಕ್ಕಾಗಿ ಡಿ.10ಕ್ಕೆ ಚುನಾವಣೆ ನಡೆಯಲಿದೆ. 14 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಸಾರಿ 25ರ ಪೈಕಿ ಕಾಂಗ್ರೆಸ್‌ನ 13 ಸದಸ್ಯರ ಸ್ಥಾನ ತೆರವಾಗುತ್ತಿದ್ದು, ಇವರಲ್ಲಿ ಹೆಚ್ಚಿನವರು ಮರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ.
ಒಟ್ಟು ಆರು ಮಂದಿ ಹಾಲಿ ಸದಸ್ಯರು ಸ್ಪರ್ಧಿಸದಿರಲು ತೀರ್ಮಾನಿಸಿದ್ದು, ಇವರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಾಂಗ್ರೆಸ್ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿನ್ನೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಮಾಡಿ ಚರ್ಚಿಸಿದ್ದಾರೆ. ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದು, ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿಗೆ ಸಹಿ ಪಡೆಯುವುದೂ ಇದರಲ್ಲಿ ಒಂದಾಗಿದೆ.
ಇವರ ಅಧಿಕಾರ ಅವಧಿ ಮುಕ್ತಾಯ
ಕಾಂಗ್ರೆಸ್ ಪಕ್ಷದಿಂದ ಈ ಸಾರಿ 13 ಸ್ಥಾನ ತೆರವಾಗುತ್ತಿದೆ. ಅವರಲ್ಲಿ ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಪ್ರತಾಪ್ ಚಂದ್ರ ಶೆಟ್ಟಿ (ಮಾಜಿ ಸಭಾಪತಿ)- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಶ್ರೀನಿವಾಸ್ ಮಾನೆ (ಹಾಲಿ ಶಾಸಕರು- ಹಾನಗಲ್)- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಆರ್. ಧರ್ಮಸೇನ- ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ವಿಜಯ್ ಸಿಂಗ್ - ಬೀದರ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಕೆ.ಸಿ.ಕೊಂಡಯ್ಯ- ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಆರ್.ಪ್ರಸನ್ನ ಕುಮಾರ್ - ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಎಂ.ಎ.ಗೋಪಾಲಸ್ವಾಮಿ- ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಎಂ.ನಾರಾಯಣಸ್ವಾಮಿ (ಪ್ರತಿಪಕ್ಷ ಸಚೇತಕ)- ಬೆಂಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ಎಸ್.ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ, ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಆಗಿದ್ದಾರೆ.
ಇವರಲ್ಲಿ ಎಂ.ನಾರಾಯಣಸ್ವಾಮಿ, ಪ್ರತಾಪ್ ಚಂದ್ರಶೆಟ್ಟಿ, ಬಸವರಾಜ್ ಪಾಟೀಲ್ ಇಟಗಿ, ವಿಜಯ್ ಸಿಂಗ್, ರಘು ಆಚಾರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇನ್ನು ಶ್ರೀನಿವಾಸ್ ಮಾನೆ ಹಾನಗಲ್ ಉಪಚುನಾವಣೆ ಗೆದ್ದು ವಿಧಾನಸಭೆ ಸೇರಿದ್ದರಿಂದ ಸಹಜವಾಗಿ ಅವರು ಸ್ಪರ್ಧಿಸುತ್ತಿಲ್ಲ. ಈ ಆರು ಸ್ಥಾನಗಳಿಗೆ ಬೇರೆ ಅಭ್ಯರ್ಥಿ ಹುಡುಕಬೇಕಿದೆ. ನಾರಾಯಣಸ್ವಾಮಿ ಬದಲು ಚೇತನ್ ಗೌಡ, ರಘು ಆಚಾರ್ ಬದಲು ಮಾಜಿ ಸಚಿವ ಎಚ್.ಆಂಜನೇಯ, ವಿಜಯ್ ಸಿಂಗ್ ಬದಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕುಟುಂಬದ ಸದಸ್ಯರೊಬ್ಬರು ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ವಯಸ್ಸಿನ ಆಧಾರದ ಮೇಲೆ ಕೆ.ಸಿ. ಕೊಂಡಯ್ಯ, ಎಸ್.ಆರ್.ಪಾಟೀಲ್ ಸಹ ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ.
ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಸಕ್ತಿ
ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಂ.ನಾರಾಯಣಸ್ವಾಮಿ(ಕೆ.ಆರ್.ಪುರ), ವಿಜಯ್ ಸಿಂಗ್ (ಬಸವಕಲ್ಯಾಣ), ರಘು ಆಚಾರ್ (ಚಿತ್ರದುರ್ಗ) ಕ್ಷೇತ್ರದಿಂದ ಕೆಳಮನೆ ಪ್ರವೇಶದ ಪ್ರಯತ್ನ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಮೇಲ್ಮನೆ ಪ್ರವೇಶ ನಿರಾಕರಿಸಿದ್ದಾರೆ ಎಂಬ ಮಾಹಿತಿ ಇದೆ. ರಘು ಆಚಾರ್ ತಮಗೆ ಮೈಸೂರಿನಿಂದ ಸ್ಪರ್ಧಿಸಲು ಅವಕಾಶ ಕೋರಿದ್ದರು. ಆದರೆ ಅದಕ್ಕೆ ಅವಕಾಶ ಸಿಗದ ಹಿನ್ನೆಲೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ನಾಯಕರನ್ನು ಕೋರಿದ್ದಾರೆ. ಇದಕ್ಕೆ ಪಕ್ಷದ ನಾಯಕರು ಒಪ್ಪಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಪರಿಷತ್ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮುಂದುವರೆದ ಫೈಟ್!