ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದು ಸಾವಿರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಘಟನೆ ಸಂಭವಿಸಿ ಮೂರು ದಿನವಾದರೂ ಇಲ್ಲಿನ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ.
ಅಂದಾಜು ₹ 80 ಕೋಟಿಗೂ ಅಧಿಕ ನಷ್ಟವಾಗಿದೆ. ನೂರಾರು ಜನ ಬೀದಿಗೆ ಬಂದಿದ್ದಾರೆ. ಆದರೆ, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇಲ್ಲಿನ ಸಂತ್ರಸ್ತರಿಗೆ ಸಾಂತ್ವನ ಹೇಳುವ ಪ್ರಯತ್ನಕ್ಕೂ ಮುಂದಾಗಿಲ್ಲ. ಕನಿಷ್ಠ ಅಧಿಕಾರಿಗಳನ್ನ ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸೂಚಿಸಬಹುದಾಗಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಸತೀಶ್ ರೆಡ್ಡಿ ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಎಲ್ಲಿದ್ದರೂ 50 ಗಂಟೆಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿ ನಮ್ಮ ಜೊತೆ ನಿಲ್ಲಬಹುದಾಗಿತ್ತು ಎಂದು ಪಾಲಿಕೆ ಸದಸ್ಯ ಮುರಳಿ ಹೇಳುತ್ತಿದ್ದಾರೆ.
ಉಪ ಮೇಯರ್ ರಾಮ್ ಮೋಹನ್ ರಾಜು ಅನಾರೋಗ್ಯದ ಕಾರಣ ಸ್ಥಳಕ್ಕೆ ಬರಲಾಗುತ್ತಿಲ್ಲ ಎನ್ನುತ್ತಾರೆ. ಕಾರಣ ಏನೇ ಇದ್ದರೂ ಕನಿಷ್ಠ ನೊಂದಿರುವ ಜನರಿಗೆ ಧೈರ್ಯ ತುಂಬದೇ ಈ ರೀತಿ ಕಣ್ಮರೆಯಾಗಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.