ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಬಿಎಂಪಿ ಬೆಡ್ ಬಾಕ್ಲಿಂಗ್ ಪ್ರಕರಣದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆಪ್ತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಾಬು ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 11 ಮಂದಿ ಆರೋಪಿಗಳನ್ನು ಸಿಸಿಬಿ ಬಂಧಿಸಿದಂತಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಬುನನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ.
ಬಳಿಕ ಕೊರೊನಾ ಸೋಂಕು ದೃಢವಾಗಿತ್ತು. ಹೋಮ್ ಕ್ವಾರಂಟೈನ್ನಾಗಿ ಗುಣಮುಖರಾದ ಬಳಿಕ ಆತನನ್ನು ಬಂಧಿಸಲಾಗಿದೆ. ಕೊರೊನಾ ಸೋಂಕು ಗುಣಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಎಂದು ಕಂಡು ಬಂದು ಹೋಮ್ ಐಸೋಲೇಷನ್ನಲ್ಲಿದ್ದ ಸೋಂಕಿತರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ವಂಚನೆ ಜಾಲದಲ್ಲಿ ತೊಡಗಿದ್ದ ನೇತ್ರಾವತಿ ಹಾಗೂ ರೋಹಿತ್ ಎಂಬುವರನ್ನು ಮೇ 3 ರಂದು ಜಯನಗರ ಪೊಲೀಸರು ಬಂಧಿಸಿದ್ದರು.
ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಿಸಿಬಿಗೆ ಹಸ್ತಾಂತರಿಸಿದ್ದರು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಕೊರೊನಾ ಸಂಕಷ್ಟ ಸಮಯವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಬಾಬು ಮುಖಾಂತರವೇ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಕೊಡಿಸುವುದರ ಜೊತೆಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಆಸ್ಪತ್ರೆಗೆ ಶಿಫಾರಸು ಮಾಡಿಸುವುದಾಗಿ ಆರೋಪಿಗಳ ಮೂಲಕ ಬಾಬು ವಾಟ್ಸ್‌ಆ್ಯಪ್ ಗ್ರೂಪ್ಗಳಲ್ಲಿ ಹರಿಬಿಡಿಸುತ್ತಿದ್ದ.
ನಂತರ ರೋಗಿಯ ಕುಟುಂಬಸ್ಥರಿಂದ ಹಣ ಪಡೆದು ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿನ ಗುಣಲಕ್ಷಣವಿಲ್ಲದ ಹಾಗೂ ಬೆಡ್ ಅವಶ್ಯಕತೆವಿಲ್ಲದ ಹೋಮ್ ಐಸೊಲೋಷನ್‌ನಲ್ಲಿರುವ ಸೋಂಕಿತರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡಿಸುತ್ತಿದ್ದ.
ಈತ ಹಲವು ಮಂದಿಯಿಂದ ಹಣ ಪಡೆದಿದ್ದ ಎನ್ನಲಾಗುತ್ತಿದೆ. ಎಷ್ಟು ಮಂದಿಗೆ ಬೆಡ್ ಬ್ಲಾಕ್ ಮಾಡಿಸಿದ್ದ? ಎಷ್ಟು ಹಣ ಸಂಪಾದನೆ ಮಾಡಿದ್ದ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.