ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಒಬ್ಬ ಪರಿಶುದ್ಧವಾದ ವ್ಯಕ್ತಿ. ಅವರ ಮೇಲಿನ ಕಮಿಷನ್ ಆರೋಪ ಶುದ್ಧ ಸುಳ್ಳು. ನಮ್ಮ ಸರ್ಕಾರದಲ್ಲಿ ಯಾರೂ ಕೂಡಾ ಕಮಿಷನ್ ತಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಮೇಲಿನ ಕಮಿಷನ್ ಆರೋಪ ಆಧಾರರಹಿತ. ಕಾಂಗ್ರೆಸ್ ನವರು ಪ್ರಚೋದನೆ ಮಾಡಿ ನಮ್ಮ ಸರ್ಕಾರ, ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ಆರೋಪ ಶುದ್ಧ ಸುಳ್ಳು. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಎಲ್ಲ ಕ್ಷೇತ್ರದ ಶಾಸಕರಿಗೂ ಅನುದಾನ ನೀಡಲಾಗಿದೆ ಎಂದರು.
ಈಶ್ವರಪ್ಪ ಮನೆಯಲ್ಲಿ ನೋಟ್ ಎಣಿಸುವ ಮಷಿನ್ ಇಟ್ಟುಕೊಂಡ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಮನೆಯಲ್ಲಿ ನೋಟಿನ ಮಷಿನ್ ಇರಬಾರದು ಎಂದು ಕಾನೂನು ಇದ್ಯಾ?. ಅವರದ್ದು ಸ್ವಂತ ಬಿಸಿನೆಸ್ ಇದೆ. ಇದಕ್ಕಾಗಿ ಎಣಿಕೆ ಮಷಿನ್ ಇರಬಾರದಾ ಎಂದು ಮರುಪ್ರಶ್ನೆ ಹಾಕಿದರು.
'ಮದರಸಾಗಳನ್ನು ನಿಷೇಧಿಸಬೇಕು': ಮದರಸಾಗಳಲ್ಲಿ ದಾರ್ಶನಿಕರು, ತ್ಯಾಗ, ಬಲಿದಾನ ಮಾಡಿದ ವ್ಯಕ್ತಿಗಳ ಬಗ್ಗೆ ಬೋಧಿಸುವುದಿಲ್ಲ. ಇಸ್ಲಾಮಿಕ್ ವಿಚಾರಗಳು ಹಾಗೂ ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ವಿಷಯಗಳನ್ನು ಬೋಧಿಸುತ್ತಾರೆ. ಹೀಗಾಗಿ ಮದರಸಾಗಳನ್ನು ನಿಷೇಧಿಸಬೇಕು ರೇಣುಕಾಚಾರ್ಯ ಒತ್ತಾಯಿಸಿದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಮದರಸಾಗಳಿಗೆ ಅನುದಾನ ನೀಡಿತ್ತು. ಅದೇ ಹಿಂದೂ ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಹಣ ಇಲ್ಲ ಎಂದಿದ್ದರು. ಆದರೆ, ದೇಶ ವಿರೋಧಿ ಚಟುವಟಿಕೆ ನಡೆಯುತ್ತದೆ ಮದರಸಾಗಳಿಗೆ ಅನುದಾನ ನೀಡಿದ್ದರು ಎಂದು ಇದೇ ವೇಳೆ ಆರೋಪಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ಅವಕಾಶ ಕೊಡಲ್ಲ: ಬಿಜೆಪಿ ಶಾಸಕ ಬೆನಕೆ