ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಸರ್ಜಾಪುರ ಸುತ್ತಮುತ್ತಲಿನ ಕೆಟ್ಟ ರಸ್ತೆ ಬಗ್ಗೆ ಕೆಂಡಾಮಂಡಲವಾಗಿದ್ದಾರೆ. ಈ ಸಂಬಂಧ ಶಾಸಕ, ಸಂಸದರು ಮತ್ತು ಸ್ಥಳೀಯ ರಾಜಕಾರಣಿಗಳನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿ ಟ್ವೀಟ್ ಮಾಡಿದ್ದಾರೆ. ಹುಸ್ಕೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಕೆಟ್ಟು ಹೋಗಿರುವ ಬಗ್ಗೆ ಟ್ವೀಟ್ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ದುಸ್ಥಿತಿ ಬಗ್ಗೆ ರಾಜಕಾರಣಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಬೇಜವಾಬ್ದಾರಿ ರಾಜಕಾರಣಿಗಳು ಎಂದು ಕಿರಣ್ ಮಜುಂದಾರ್ ಷಾ ಟೀಕಿಸಿದ್ದಾರೆ. ಉತ್ತಮ ರಸ್ತೆ ಸೌಕರ್ಯ ಕಲ್ಪಿಸದ ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಆನೇಕಲ್ ಶಾಸಕ ಮತ್ತು ಆನೇಕಲ್ ಕ್ಷೇತ್ರದ ಸಂಸದರು ಜವಾಬ್ದಾರಿ ಇಲ್ಲದ ರಾಜಕಾರಣಿಗಳು ಎಂದು ಜರಿದಿದ್ದಾರೆ. ಹುಸ್ಕೂರು - ಸರ್ಜಾಪುರ ರಸ್ತೆ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಉತ್ತಮ ರಸ್ತೆಯ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಯಾಕೆ ಬಸ್ ಡಿಪೋ, ವಸತಿ ಗೃಹಗಳನ್ನು ನಿರ್ಮಿಸಬೇಕಿತ್ತು ಎಂದು ಖಾರವಾಗಿ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
ಕೆಟ್ಟ ರಸ್ತೆ ಬಗ್ಗೆ ತಮ್ಮ ಎಲ್ಲಾ ಆಕ್ರೋಶ ಹೊರಹಾಕಿರುವ ಬಯೋಕಾನ್ ಮುಖ್ಯಸ್ಥೆ, ಒಳ್ಳೆಯ ರಸ್ತೆ ಸೌಕರ್ಯ ಒದಗಿಸದ ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗಬೇಕೆಂದು (Shame on all the local politicians) ಟ್ವೀಟ್ನಲ್ಲಿ ಆನೇಕಲ್ ತಾಲೂಕಿಗೆ ಸಂಬಂಧ ಪಟ್ಟ ಶಾಸಕ, ಸಂಸದರು ಮತ್ತು ಪಂಚಾಯಿತಿ ಮಟ್ಟದ ರಾಜಕಾರಣಿಗಳಿಗೆ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ : ರಸ್ತೆ ಕಾಮಗಾರಿ ಮಾಡಿದ ಮೂರು ದಿನದಲ್ಲೇ ಕಿತ್ತು ಬರುತ್ತಿದೆ ಡಾಂಬರು.. ಜನರ ಆತಂಕ