ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಚಾರಿತ್ರ್ಯ ವಧೆಯಾಗುವಂತೆ ಸಂದೇಶಗಳನ್ನು ಹರಡುವುದಕ್ಕೆ ಕಡಿವಾಣ ಹಾಕಬೇಕು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಶಾಸಕ ಎನ್. ಮಹೇಶ್ ಮನವಿ ಮಾಡಿದ್ದಾರೆ.
ಆರ್.ಟಿ.ನಗರದಲ್ಲಿರುವ ಗೃಹ ಸಚಿವರ ನಿವಾಸಕ್ಕೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಭೇಟಿ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಸಂದೇಶಗಳನ್ನು ಹರಿಬಿಡುತ್ತಿರುವ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದರು. ನನ್ನ ಚಾರಿತ್ರ್ಯವಧೆ ಮಾಡಲಾಗುತ್ತಿದೆ. ಈ ರೀತಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಶಾಸಕರ ಮನವಿ ಆಲಿಸಿದ ಗೃಹ ಸಚಿವ ಬೊಮ್ಮಾಯಿ, ಸೂಕ್ತ ಕ್ರಮದ ಭರವಸೆ ನೀಡಿದರು. ಗೃಹ ಸಚಿವರ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಮಹೇಶ್, ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುತ್ತಿದ್ದಾರೆ. ಸಮುದಾಯ, ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡಲು ಶಕ್ತಿಯುತವಾಗಿ ಕೆಲಸ ಮಾಡಬೇಕು. ಸೈಬರ್ ಕ್ರೈಂ ಅನ್ನು ಇನ್ನೂ ಶಕ್ತಿಯುತವಾಗಿ ಮಾಡಬೇಕು. ಪ್ರತಿ ಜಿಲ್ಲೆಯಲ್ಲೂ ಈ ಬಗ್ಗೆ ನಿಗಾವಹಿಸಬೇಕು. ಯಾರು ಈ ರೀತಿ ಚಾರಿತ್ರ್ಯವಧೆ ಮಾಡುತ್ತಾರೋ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಾಗಿ ತಿಳಿಸಿದರು.
ನನ್ನ ಮನವಿಗೆ ಸ್ಪಂದಿಸಿ ಪ್ರತಿ ಜಿಲ್ಲೆಗೊಬ್ಬ ವಿಶೇಷ ವ್ಯಕ್ತಿಯನ್ನು ನಿಯೋಜಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಸಂದೇಶವನ್ನು ನಿಯಂತ್ರಣ ಮಾಡದಿದ್ದರೆ ಸಾಮಾಜಿಕ ಅಶಾಂತಿ ಸೃಷ್ಟಿಯಾಗುತ್ತದೆ. ಒಂದು ವರ್ಷದಿಂದ ನನ್ನ ವಿರುದ್ಧ ನಾಲ್ಕೈದು ಜನ ನಿತ್ಯ ಸಂದೇಶಗಳನ್ನು ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮಕ್ಕೆ ರಾಮನಗರ ಜಿಲ್ಲಾಧಿಕಾರಿ ಹಾಗೂ ಗೃಹಸಚಿವರಿಗೂ ಮನವಿ ಮಾಡಿದ್ದೇನೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಪೊಲೀಸ್ ಇಲಾಖೆಯು ತುಂಬಾ ನಿಷ್ಪಕ್ಷಪಾತವಾಗಿ ತೆಗೆದುಕೊಳ್ಳಬೇಕು. ಈ ಪ್ರಕರಣದಲ್ಲಿ ಯಾವುದೇ ರಾಜಕಾರಣಿಯ ಕೈವಾಡ ಇದ್ದರೂ, ಅವರ ವಿರುದ್ಧ ಕ್ರಮ ಆಗಲೇಬೇಕು. ಅಖಂಡ ಶ್ರೀನಿವಾಸಮೂರ್ತಿ ದಲಿತ ಎನ್ನುವುದು ಮುಖ್ಯವಲ್ಲ. ಯಾವುದೇ ಶಾಸಕ ಆದರೂ ಅವರ ಮನೆ ಮೇಲೆ ದಾಳಿ ಮಾಡುತ್ತಾರೆ ಎಂದರೆ, ಇವರು ಎಂತಹ ಕ್ರಿಮಿನಲ್ ಎನ್ನುವುದು ಅರ್ಥಮಾಡಿಕೊಳ್ಳಬೇಕು. ಇದರಲ್ಲಿ ದಲಿತ ಅನ್ನುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಇದರಲ್ಲಿ ಪಕ್ಷದ ವ್ಯವಹಾರ ಇದ್ದರೆ, ಅದನ್ನು ಹೊರಗೆಳೆಯಬೇಕು ಎಂದರು.
ಡಿ.ಜೆ.ಹಳ್ಳಿಯಲ್ಲಿ ನಡೆದಂತಹ ಪ್ರಕರಣ ಇನ್ನು ಮುಂದೆ ರಾಜ್ಯದಲ್ಲಿ ಮತ್ತೆ ನಡೆಯಬಾರದು. ರಾಜ್ಯದಲ್ಲಿ ಶಾಂತಿ ಸೌಹಾರ್ದ ಕಾಪಾಡುವಲ್ಲಿ ಇದು ಒಂದು ದೊಡ್ಡ ಕಪ್ಪುಚುಕ್ಕೆ ಆಗಿದೆ. ಹೀಗಾಗಿ ಇದನ್ನು ಬಿಡಬೇಡಿ. ಬಹಳ ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.