ಬೆಂಗಳೂರು: ಇಂದಿನ ಸಂಪುಟ ವಿಸ್ತರಣೆಗೆ ನನ್ನ ಸಂಪೂರ್ಣ ಅಸಮಾಧಾನವಿದ್ದು, ನಮ್ಮನ್ನು ಕಡೆಗಣಿಸಿದ ಕುರಿತು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಓದಿ: ಜ.28ರಿಂದ ಫೆ.5ರವರೆಗೆ ವಿಧಾನಮಂಡಲ ಜಂಟಿ ಅಧಿವೇಶನ
ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಂಪುಟ ವಿಸ್ತರಣೆಗೆ ನನ್ನ ಅಸಮಾಧಾನವಿದೆ. 2008ರಲ್ಲಿ ಕೂಡ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂತ್ರ ಅನುಸರಿಸುವವರಿಗೆ ಅವಕಾಶ ಕಲ್ಪಿಸಿದ್ದರು. ಇವತ್ತಿನ ದಿನ ಕೂಡ ಮುಖ್ಯಮಂತ್ರಿಗಳು ಅದೇ ರೀತಿಯಲ್ಲಿ ಮಂತ್ರಿಮಂಡಲವನ್ನು ವಿಸ್ತರಣೆ ಮಾಡಿದ್ದಾರೆ ಎಂದರು.
ಈ ಹಿಂದೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದಾಗ ಸಂಪುಟದಲ್ಲಿ ನನಗೆ ಅವಕಾಶ ಸಿಗದೇ ಇರುವಾಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೆ. ಮುಂದಿನ ವಿಸ್ತರಣೆ ವೇಳೆ ಯುವಕರಿಗೆ, ಪಕ್ಷ ನಿಷ್ಠರಿಗೆ, ನಿಮ್ಮಂತವರಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ ಐದು ಬಾರಿ ಆಯ್ಕೆಯಾಗಿದ್ದರು. ಅವರು ಸಂಭಾವಿತರು. ಯಾವುದೇ ರೀತಿಯ ಒತ್ತಡ ತಂತ್ರ ಮಾಡಲಿಲ್ಲ ಎಂದು ಅವರಿಗೆ ಯಾವುದೇ ಸ್ಥಾನಮಾನ ಕೊಡಲಿಲ್ಲ. ಅವರಿಗೂ ಕೂಡ ಅನ್ಯಾಯ ಮಾಡಲಾಗಿತ್ತು. ಹಾಗಾಗಿ ನಿಮಗೆ ಅವಕಾಶ ಮಾಡಿಕೊಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದರು. ಆದರೆ ಇಂದು ಆ ಯಾವುದೇ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಷತ್ ಸದಸ್ಯರಿಗೆ ಈಗ ಯಾಕೆ ಕೊಡಬೇಕಿತ್ತು, ಏನು ಅವಶ್ಯಕತೆಯಿತ್ತು ಎಂದು ನನಗೆ ಗೊತ್ತಿಲ್ಲ. ಪಕ್ಷಕ್ಕೆ ಸಮಯ ಕೊಡುವವರಿಗೆ, ಕೆಲಸ ಮಾಡುವ ಐಡಿಯಾಲಜಿ ಇರುವವರಿಗೆ, ನಮ್ಮಂತವರಿಗೆ ಅವಕಾಶ ಕೊಡದೆ ಅನ್ಯಾಯ ಎಸಗಲಾಗಿದೆ. ಪಕ್ಷದ ವರಿಷ್ಠರ ಗಮನಕ್ಕೂ ಈ ವಿಷಯವನ್ನು ತರುತ್ತೇವೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ದೂರು ನೀಡುತ್ತೇನೆ ಎಂದರು.
ಈಗ ಹೊಸದಾಗಿ ಸಚಿವರಾಗುವವರು ಒಳ್ಳೆಯ ಕೆಲಸ ಮಾಡಲಿ, ಅವರಿಗೆ ಶುಭವಾಗಲಿ. ರಾಜ್ಯದ ಕಲ್ಯಾಣ ಕೆಲಸ ಮಾಡುವಂತಾಗಲಿ ಎಂದು ವಿನಂತಿಸುತ್ತೇನೆ. ನಮ್ಮ ಸರ್ಕಾರದ ಮೇಲೆ ಜನರಿಗೆ ಅಪಾರ ಭರವಸೆಯಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಲಿ ಎಂದರು.