ಬೆಂಗಳೂರು: ದಿನೇ ದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಕೋವಿಡ್ -19 ಸೋಂಕಿನ ಕುರಿತು ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ನೀಡಿರುವ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್‌ನ ಮಾಲೀಕ ಡಾ. ರಾಜುರಿಗೆ ಜಿಲ್ಲಾ ಆರೋಗ್ಯ ಕಚೇರಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ತಪ್ಪು ಮಾರ್ಗದರ್ಶನ ನೀಡುತ್ತಿದ್ದು, ತಮ್ಮ ಕ್ಲಿನಿಕ್‌ನಲ್ಲಿನ ವೈದ್ಯರುಗಳು ಮಾಸ್ಕ್, ಸ್ಯಾನಿಟೈಜರ್‌ಗಳನ್ನು ಬಳಸದೇ ಕ್ಲಿನಿಕ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 (2020 ರ ಕರ್ನಾಟಕ ಸುಗ್ರೀವಾಜ್ಞೆ 07) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಸಂಬಂಧ ಕೋವಿಡ್-19 ಗೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ತಮ್ಮ ಸಮಜಾಯಿಷಿಯನ್ನು ಪತ್ರ ತಲುಪಿದ 1 ದಿನದ ಒಳಗಾಗಿ ಕಚೇರಿಗೆ ಸಲ್ಲಿಸಲು ಸೂಚಿಸಿದೆ.
ಇಲ್ಲವಾದಲ್ಲಿ ತಮ್ಮ ಹೇಳಿಕೆ ಏನೂ ಇಲ್ಲವೆಂದು ಭಾವಿಸಿ ತಮ್ಮ ವಿರುದ್ಧ ಕೆ.ಪಿ.ಎಂ.ಇ ಕಾಯ್ದೆ 2017 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 (2020 ರ ಕರ್ನಾಟಕ ಸುಗ್ರೀವಾಜ್ಞೆ 07) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ಮತ್ತು ಭಾರತೀಯ ದಂಡ ಸಂಹಿತೆ ಯ ಕಾಯ್ದೆಯ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.