ಬೆಂಗಳೂರು: ಕಾಂಗ್ರೆಸ್ಗೆ ಜವಾಬ್ದಾರಿ, ಬದ್ಧತೆ ಇಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ಇವತ್ತು ಕರಾಳ ದಿನ. ಕಾಂಗ್ರೆಸ್ನ ನಡವಳಿಕೆಯನ್ನು ಸದನದಲ್ಲಿ ರಾಜ್ಯದ ಜನ ನೋಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ, ಡಿಕೆಶಿಯವರನ್ನೊಳಗೊಂಡ ತಂಡದ ನಡವಳಿಕೆಯನ್ನು ಜನ ನೋಡಿದ್ದಾರೆ. ನಿನ್ನೆ ಕಾಂಗ್ರೆಸ್ ಸುಳ್ಳಿನಿಂದ ಕೂಡಿದ ಟೀಕೆ, ನಿಂದನೆಯನ್ನು ಸರ್ಕಾರದ ಮೇಲೆ ಮಾಡಿತ್ತು. ಇವತ್ತು ಸರ್ಕಾರದ ಉತ್ತರ ಕೇಳದೇ ಕಾಂಗ್ರೆಸ್ ಪಲಾಯನ ಮಾಡಿದೆ. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ.
ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ಸರ್ಕಾರವು ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದೆ. ಸದನದಲ್ಲಿ ನಮ್ಮ ವಾಸ್ತವದ ಆಧಾರದ ಉತ್ತರವನ್ನು ಕೇಳದೇ ಕಾಂಗ್ರೆಸ್ ಪಲಾಯನ ಮಾಡಿದೆ. ನಾನು ನನ್ನ ಉತ್ತರವನ್ನು ಸದನದಲ್ಲಿ ಮಂಡಿಸಿದ್ದೇನೆ. ರಾಜ್ಯದಲ್ಲಿ 5.40 ಕೋಟಿ ಜನರಿಗೆ ಲಸಿಕೆ ಕೊಡಲಾಗಿದೆ. 30 ಸಾವಿರ ಆಕ್ಸಿಜನ್ ಹಾಸಿಗೆ ಸಿದ್ಧಗೊಳಿಸಲಾಗಿದೆ. ಆಕ್ಸಿಜನ್ ಪ್ಲಾಂಟ್ 3.5 ಸಾವಿರ ಟನ್ ಸಂಗ್ರಹ ಸಾಮರ್ಥ್ಯ ಇದೆ. ಮೂರನೇ ಅಲೆಗೂ ಸರ್ಕಾರ ಸಿದ್ಧವಿದೆ ಎಂದರು.
ಚಾಮರಾಜನಗರ ಘಟನೆ ಬಗ್ಗೆ ಕಾಂಗ್ರೆಸ್ ತಪ್ಪು ಮಾಹಿತಿ ಕೊಟ್ಟಿದೆ. ಜಸ್ಟೀಸ್ ಪಾಟೀಲ್ ಅವರ ಏಕ ಸದಸ್ಯ ನೇತೃತ್ವದ ಸಮಿತಿ ವರದಿ ಕೊಟ್ಟ ಬಳಿಕ ಇದರ ಸತ್ಯಾಸತ್ಯತೆ ಗೊತ್ತಾಗುತ್ತದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ವೈದ್ಯರು ಮುಷ್ಕರ ಹೂಡಿದ್ದರು. ಆಗ ಎರಡು ದಿನಗಳಲ್ಲಿ 25 ಜನ ಸತ್ತರು. ಅದನ್ನ ಯಾಕೆ ಡಿಕೆಶಿ ಚಾಮರಾಜನಗರದಲ್ಲಿ ಮಾಡಿದ ಹಾಗೆ ರೆಕಾರ್ಡ್ ಮಾಡಲಿಲ್ಲ?. ಕಾಂಗ್ರೆಸ್ನವರದ್ದು ಡಬಲ್ ಸ್ಟಾಂಡರ್ಡ್ ನಿಲುವು. ಸಾವಿನ ಮನೆಯಲ್ಲಿ ನೀಚತನ ಮಾಡೋದು ಕಾಂಗ್ರೆಸ್ ಬುದ್ಧಿ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ ಎಂದು ಸುಧಾಕರ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ: ಬೆಳಗಾವಿಯ ಶಾಕೀರ್ ಅಹ್ಮದ್ಗೆ 583ನೇ ರ್‍ಯಾಂಕ್